ಬೆಂಗಳೂರು: ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ರಾಜ್ಯ ಸರಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ರಾಜ್ಯದಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದ ದುರ್ಬಲ ವರ್ಗದ ವಸತಿ ರಹಿತರಿಗಾಗಿ. ರಾಜ್ಯ ಸರಕಾರದ ವಸತಿ ಯೋಜನೆಗಳಡಿಯಲ್ಲಿ ಹೊಸ ಮನೆಗಳನ್ನು ಮಂಜೂರು ಮಾಡಲಾಗಿದೆ.
2021-22ರ ಸಾಲಿನ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ಯಡಿ 4 ಲಕ್ಷ ಮನೆಗಳಿಗಾಗಿ ರೂ. 2000 ಕೋಟಿ (ಶೇ.40ರಷ್ಟ ರಾಜ್ಯದ ಪಾಲು) ಮತ್ತು ರಾಜ್ಯ ವಸತಿ ಯೋಜನೆಯಡಿ 1 ಲಕ್ಷ ಮನೆಗಳಿಗಾಗಿ ರೂ. 1500 ಕೋಟಿಗಳ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ಕೇಂದ್ರ ಸರಕಾರದಿಂದ 4 ಲಕ್ಷ ಮನೆಗಳ ಹೊಸ ಗುರಿಗೆ ಅನುಮೋದನೆ ದೊರೆಯದಿದ್ದಲ್ಲಿ ಅಥವಾ ಅದಕ್ಕಿಂತ ಕಡಿಮೆ ಮನೆಗಳಿಗೆ ಅನುಮೋದನೆ ದೊರೆತಲ್ಲಿ ಉಳಿದ ಮನೆಗಳನ್ನು ರಾಜ್ಯದ ವಸತಿ ಯೋಜನೆಗಳಡಿಯಲ್ಲಿ ಅನುಷ್ಠಾನಗೊಳಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿತ್ತು. ಈ ಸಂಬಂಧ ಸೆಪ್ಟೆಂಬರ್ 9ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು.
ಅದರಂತೆ ಕೇಂದ್ರ ಸರಕಾರದಿಂದ ಈವರೆಗೆ ಅನುಮೋದನೆ ದೊರೆಯದೇ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳ ನಿರ್ಮಾಣಕ್ಕೆ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಇವರಿಗೆ ಆದೇಶಿಸಲಾಗಿದೆ.