ಉತ್ತರ ಪ್ರದೇಶದ ಮಥುರಾ, ಆಗ್ರಾ ಮತ್ತು ಫಿರೋಜಾಬಾದ್ ಜಿಲ್ಲೆಗಳಲ್ಲಿ ಸಂಭವಿಸಿದ ಬಹುತೇಕ ಸಾವುಗಳಿಗೆ ಡೆಂಗ್ಯೂ ಜ್ವರದ ಡಿ 2 ಸ್ಟ್ರೈನ್ ಕಾರಣ ಎಂದು ಐಸಿಎಂಆರ್ ಡೈರೆಕ್ಟರ್ ಜನರಲ್ ಡಾ. ಬಲರಾಮ್ ಭಾರ್ಗವ ತಿಳಿಸಿದ್ದಾರೆ.
ಡಿ 2 ಸ್ಟ್ರೈನ್ ನಿಂದ ಉಂಟಾದ ಡೆಂಗ್ಯೂ ಮರಣಕ್ಕೆ ಕಾರಣವಾಗಬಹುದು, ಇದು ಜೀವಕ್ಕೆ ಮಾರಕವಾಗಬಹುದು ಎಂದು ತಿಳಿಸಿರುವ ಡಾ ಭಾರ್ಗವ, ಮಥುರಾ, ಆಗ್ರಾ ಮತ್ತು ಫಿರೋಜಾಬಾದ್ ಜಿಲ್ಲೆಗಳಲ್ಲಿ ಸಂಭವಿಸಿದ ಸಾವುಗಳಿಗೆ ಇದೇ ಕಾರಣ ಎಂದು ಹೇಳಿದ್ದಾರೆ.
ಕೊರೊನಾ ಕಾರ್ಯಪಡೆ ಮುಖ್ಯಸ್ಥ ಡಾ. ವಿ.ಕೆ. ಪೌಲ್ ಮಾತನಾಡಿ, ಡೆಂಗ್ಯೂವಿಗೆ ಈವರೆಗೆ ಲಸಿಕೆ ಲಭ್ಯವಿಲ್ಲ. ಹೀಗಾಗಿ ಕೋವಿಡ್ ಕುರಿತು ಜಾಗೃತಿ ವಹಿಸುವಂತೆಯೇ ಡೆಂಗ್ಯೂವನ್ನೂ ಸಹ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದಿದ್ದಾರೆ.
ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಸೊಳ್ಳೆ ಪರದೆ, ಸೊಳ್ಳೆ ನಿವಾರಕ ಬಳಸುವುದು ಸೇರಿದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಡೆಂಗ್ಯೂ, ಮಲೇರಿಯಾ ಮೊದಲಾದವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಇವುಗಳ ವಿರುದ್ದವೂ ಹೋರಾಡಬೇಕಿದೆ ಎಂದು ತಿಳಿಸಿದ್ದಾರೆ.
ಸೊಳ್ಳೆ ಉತ್ಪಾದನೆಗೆ ಕಾರಣವಾಗುವ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳುವುದು, ತೆಂಗಿನ ಚಿಪ್ಪುಗಳಲ್ಲಿ ನೀರು ಸಂಗ್ರಹವಾಗದಂತೆ ಗಮನಿಸಬೇಕಾಗುವುದು ಅಗತ್ಯವಾಗಿರುತ್ತದೆ ಎಂದು ಸೂಚಿಸಲಾಗಿದೆ.
ತಜ್ಞರ ಪ್ರಕಾರ, ಡೆಂಗ್ಯೂ ವೈರಸ್ ಸೆರೊಟೈಪ್ 2 (DENV-2 ಅಥವಾ D2) ಅತ್ಯಂತ ತೀವ್ರವಾದ ತಳಿ ಎಂಬುದು ಕಂಡು ಬಂದಿದೆ. ಮತ್ತು ಇದು ರೋಗದ ತೀವ್ರತೆಯನ್ನು ಉಂಟುಮಾಡಬಹುದೆಂದು ಭಾವಿಸಲಾಗಿದೆ.
ಇತ್ತೀಚೆಗೆ ಕೇಂದ್ರ ತಂಡವು ಫಿರೋಜಾಬಾದ್ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ, ಹೆಚ್ಚಿನ ಪ್ರಕರಣಗಳು ಡೆಂಗ್ಯೂನಿಂದ ಸಂಭವಿಸಿವೆ, ಈ ಪೈಕಿ ಕೆಲವು ಸ್ಕ್ರಬ್ ಟೈಫಸ್ ಮತ್ತು ಲೆಪ್ಟೊಸ್ಪೈರೋಸಿಸ್ ನಿಂದಾಗಿರುವುದು ಕಂಡು ಬಂದಿದೆ. ಹೀಗಾಗಿ ಪರಿಸ್ಥಿತಿ ಮೇಲೆ ನಿಗಾ ಇಡಲು ಕೇಂದ್ರ ತಂಡ ಡೆಂಗ್ಯೂ ತೀವ್ರವಾಗಿರುವ ಜಿಲ್ಲೆಗಳಲ್ಲಿ ತಜ್ಞರನ್ನು ನೇಮಿಸಿದೆ.