ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಮತ್ತೆ ವಿಘ್ನ ಎದುರಾಗಿದೆ. ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ(KSAT) ತಡೆಯಾಜ್ಞೆಯಿಂದಾಗಿ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತಗೊಂಡಿದ್ದು, ವರ್ಗಾವಣೆ ನಿರೀಕ್ಷೆಯಲ್ಲಿದ್ದ 75 ಸಾವಿರಕ್ಕೂ ಅಧಿಕ ಶಿಕ್ಷಕರಿಗೆ ನಿರಾಸೆಯಾಗಿದೆ.
ಈ ವರ್ಷವಾದರೂ ವರ್ಗಾವಣೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿರುವುದು ನಿರಾಸೆ ತಂದಿದೆ. ಕಳೆದ ಮೂರು ತಿಂಗಳಿನಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ ತಡೆಯಾಜ್ಞೆ ಕಾರಣ ಮತ್ತೆ ಸ್ಥಗಿತಗೊಂಡಿದೆ.
ಕಳೆದ ಎರಡು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಈ ವರ್ಷ ವರ್ಗಾವಣೆಗೆ ಅವಕಾಶ ನೀಡಲಾಗಿತ್ತು. ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಿ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ವರ್ಗಾವಣೆ ಕೋರಿದ ಶಿಕ್ಷಕರಿಗೆ ಕೌನ್ಸಲ್ಲಿಂಗ್ ನಡೆಯಬೇಕಿದೆ.
2016 -17 ನೇ ಸಾಲಿನಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೊಂಡಿದ್ದ ಶಿಕ್ಷಕರು KSAT ಮೆಟ್ಟಿಲೇರಿದ್ದು, ಅವರ ಮನವಿಯನ್ನು ಪುರಸ್ಕರಿಸಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲಾಗಿದೆ. ತಡೆಯಾಜ್ಞೆ ತೆರವಾಗದೆ ವರ್ಗಾವಣೆ ಪ್ರಕ್ರಿಯೆ ನಡೆಸುವಂತಿಲ್ಲ. ಇದರಿಂದಾಗಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮತ್ತೆ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ.