ತನ್ನ ಕೈ ಮೀರಿದ ಕಾರಣಕ್ಕಾಗಿ ರೈಲ್ವೆ ಸೇವೆಯಲ್ಲಿ ವಿಳಂಬವಾಗಿದೆ ಎಂದು ಸಾಬೀತು ಪಡಿಸಲು ಸಾಧ್ಯವಾಗದೇ ಹೋದಲ್ಲಿ ಪ್ರಯಾಣಿಕರಿಗೆ ಸೂಕ್ತ ಪರಿಹಾರವನ್ನು ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಾರ್ವಜನಿಕ ಸಾರಿಗೆಗಳು ಕೂಡ ಖಾಸಗಿ ಸಾರಿಗೆ ಹಾಗೂ ಸಂಪರ್ಕ ಸೇವೆಯ ಜೊತೆ ಸ್ಪರ್ಧಿಸಲೇಬೇಕಿದೆ. ಹೀಗಾಗಿ ರೈಲ್ವೆ ಇಲಾಖೆಯು ತನ್ನ ವ್ಯವಸ್ಥೆ ಹಾಗೂ ಕೆಲಸದ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕಿದೆ. ಪ್ರಯಾಣಿಕರಿಗೆ ಆಡಳಿತ ವ್ಯವಸ್ಥೆ ಮೇಲೆ ಕರುಣೆ ತೋರಲು ಸಾಧ್ಯವಿಲ್ಲ. ಹೀಗಾಗಿ ಸೇವೆಯಲ್ಲಿ ವಿಳಂಬವಾದಲ್ಲಿ ಯಾರಾದರೂ ಜವಾಬ್ದಾರಿ ತೆಗೆದುಕೊಳ್ಳಲೇಬೇಕು ಎಂದು ನ್ಯಾಯಮೂರ್ತಿ ಎಂ.ಆರ್. ಶಾ ಹಾಗೂ ಅನಿರುದ್ಧ ಬೋಸ್ ನೇತೃತ್ವದ ನ್ಯಾಯಪೀಠ ಹೇಳಿದೆ.
2016ರಲ್ಲಿ ಕುಟುಂಬಸ್ಥರ ಜೊತೆಗೆ ಜಮ್ಮುವಿಗೆ ಪ್ರಯಾಣ ಬೆಳೆಸುವ ವೇಳೆ ರೈಲು ನಾಲ್ಕು ಗಂಟೆ ವಿಳಂಬವಾದ ಬಗ್ಗೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂಬ ಆಗ್ರಹವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ರೈಲು ವಿಳಂಬದಿಂದಾಗಿ ಕುಟುಂಬಸ್ಥರು ವಿಮಾನಯಾನ ತಪ್ಪಿಸಿಕೊಂಡರು. ಇದರಿಂದ ದುಬಾರಿ ಟ್ಯಾಕ್ಸಿ ಮೂಲಕ ಶ್ರೀನಗರಕ್ಕೆ ತೆರಳಬೇಕಾಗಿ ಬಂದಿತ್ತು. ವಿಮಾನಯಾನ ಮಿಸ್ ಆಗಿದ್ದು ಮಾತ್ರವಲ್ಲದೇ ದಾಲ್ ಸರೋವರದಲ್ಲಿ ದೋಣಿ ಬುಕ್ಕಿಂಗ್ ಮಾಡಿದ್ದು ಕೂಡ ವ್ಯರ್ಥವಾಗಿತ್ತು.
ಜಿಲ್ಲಾ ಗ್ರಾಹಕರ ವೇದಿಕೆಯು ರೈಲ್ವೆ ಸೇವೆಯಲ್ಲಿ ವ್ಯತ್ಯಯ ಇದೆ ಎಂದು ಅಭಿಪ್ರಾಯಪಟ್ಟಿತ್ತು. ಹಾಗೂ ಪ್ರಯಾಣಿಕರಿಗೆ ಟ್ಯಾಕ್ಸಿ ವೆಚ್ಚ 15,000 ರೂ, ಬುಕ್ಕಿಂಗ್ ವೆಚ್ಚ 10000 ರೂ. ಹಾಗೂ ಮಾನಸಿಕ ಒತ್ತಡಕ್ಕೆ ಪರಿಹಾರವಾಗಿ 5 ಸಾವಿರ ರೂಪಾಯಿ ನೀಡುವಂತೆ ವಾಯುವ್ಯ ರೈಲ್ವೆ ಇಲಾಖೆಗೆ ಆದೇಶ ನೀಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ರೈಲ್ವೆ ಇಲಾಖೆಯು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಏಕೆಂದರೆ ಜಮ್ಮುವಿನಲ್ಲಿ ರೈಲು ವಿಳಂಬವಾದ ಬಗ್ಗೆ ರೈಲ್ವೆ ಇಲಾಖೆ ಬಳಿ ಯಾವುದೇ ಸ್ಪಷ್ಟನೆ ಇರಲಿಲ್ಲ.