ಬೆಂಗಳೂರು: ರಾಜ್ಯದಲ್ಲಿ 9, 10 ನೇ ತರಗತಿ ಆಗಸ್ಟ್ 23 ರಂದು ಆರಂಭವಾಗಿದ್ದು, ಸೋಮವಾರದಿಂದ 6 ರಿಂದ 8ನೇ ತರಗತಿ ಶುರುವಾಗಿದೆ. ಆನ್ಲೈನ್ ತರಗತಿಗಳು ಶೈಕ್ಷಣಿಕ ವರ್ಷಾರಂಭದಿಂದಲೂ ನಡೆಯುತ್ತಿವೆ.
1 ರಿಂದ 10 ನೇ ತರಗತಿ ಶಾಲಾ ಮಕ್ಕಳಿಗೆ ದಸರಾ ರಜೆ ನಿಗದಿ ಮಾಡಲಾಗಿದೆ. 2021 – 22 ನೇ ಸಾಲಿನ ಶೈಕ್ಷಣಿಕ ವರ್ಷದ ದಸರಾ ರಜೆ ಹಾಗೂ ಬೇಸಿಗೆ ರಜೆಯನ್ನು ಶಿಕ್ಷಣ ಇಲಾಖೆ ಘೋಷಿಸಿದೆ. ಅಕ್ಟೋಬರ್ 10 ರಿಂದ 10 ದಿನಗಳ ಕಾಲ ರಾಜ್ಯದ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಲಾಗಿದೆ. ಅಕ್ಟೋಬರ್ 10 ರಿಂದ 20 ರವರೆಗೆ 10 ದಿನಗಳ ಕಾಲ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ, ಅನುದಾನರಹಿತ ಶಾಲೆಗಳಿಗೆ ರಜೆ ನೀಡಲಾಗಿದೆ.
2021 -22 ನೇ ಶೈಕ್ಷಣಿಕ ವರ್ಷದ ಬೇಸಿಗೆ ರಜೆಯನ್ನು 2022 ರ ಮೇ 1 ರಿಂದ 28 ರವರೆಗೆ ನೀಡಲಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜುಲೈ 2021 ರಿಂದ ಏಪ್ರಿಲ್ 2022 ರ ವರೆಗೆ 304 ದಿನಗಳು ಲಭ್ಯವಿದ್ದು, 66 ರಜೆ ದಿನಗಳಿವೆ. ಉಳಿದ 238 ದಿನಗಳಲ್ಲಿ 4 ಸ್ಥಳೀಯ ರಜೆ, ದಸರಾ ರಜೆ ಹೊರತಾಗಿ 223 ಶಾಲಾ ಕರ್ತವ್ಯದ ದಿನಗಳು ಕಲಿಕೆ, ಬೋಧನಾ ಪ್ರಕ್ರಿಯೆಗೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಿವೆ ಎಂದು ಹೇಳಲಾಗಿದೆ.