ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಸ್ವದೇಶಿ ಲಸಿಕೆಗಳನ್ನು 2 ವರ್ಷದ ಮಕ್ಕಳವರೆಗೂ ನೀಡಲು ಆರಂಭಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಕ್ಯೂಬಾ ರಾಷ್ಟ್ರ ಪಾತ್ರವಾಗಿದೆ.
ಈ ಕಮ್ಯೂನಿಸ್ಟ್ ದ್ವೀಪದಲ್ಲಿ 11.2 ಮಿಲಿಯನ್ ಜನಸಂಖ್ಯೆ ಇದ್ದು ಶಾಲೆ ಪುನಾರಂಭ ಆಗುವುದರ ಒಳಗಾಗಿ ಎಲ್ಲಾ ಮಕ್ಕಳಿಗೂ ಲಸಿಕೆ ನೀಡುವ ಗುರಿಯನ್ನು ಕ್ಯೂಬಾ ಹೊಂದಿದೆ. ಅಂದಹಾಗೆ ಕ್ಯೂಬಾದಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಬಂದ್ ಆಗಿದ್ದ ಶಾಲೆಗಳು ಇನ್ನೂ ತೆರೆದಿಲ್ಲ.
ಕ್ಯೂಬಾದಲ್ಲಿ ಸೋಮವಾರದಿಂದ ಹೊಸ ಶೈಕ್ಷಣಿಕ ವರ್ಷವನ್ನು ಆರಂಭಿಸಲಾಗಿದೆ. ಆದರೆ ಮನೆಯಲ್ಲಿ ದೂರದರ್ಶನ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಭೋದನೆ ಮಾಡಲಾಗುತ್ತಿದೆ. ಅಂದಹಾಗೆ ಕ್ಯೂಬಾದ ಹೆಚ್ಚಿನ ಮನೆಗಳಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲ. ಇದೇ ಕಾರಣಕ್ಕಾಗಿ ದೂರದರ್ಶನದ ಮೂಲಕ ಶಿಕ್ಷಣ ನೀಡಲಾಗುತ್ತಿದೆ.
ಮಕ್ಕಳಿಗೆ ನೀಡಲಾಗುವ ಲಸಿಕೆಯಾದ ಅಡ್ಬಾಲಾ ಹಾಗೂ ಸೋಬರೇನಾ ತಮ್ಮ ಪ್ರಯೋಗಾತ್ಮಕ ಪರೀಕ್ಷೆಯನ್ನು ಪೂರೈಸಿವೆ. ಶುಕ್ರವಾರ ಲಸಿಕೆಗಳ ಪ್ರಯೋಗಾತ್ಮಕ ಪರೀಕ್ಷೆಗಳು ಯಶಸ್ವಿಯಾಗುತ್ತಿದ್ದಂತೆಯೇ 12 ವರ್ಷ ಪ್ರಾಯದ ಮಕ್ಕಳಿಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿತ್ತು.
ಸೋಮವಾರದಿಂದ ಸಿಯಾನ್ಫ್ಯೂಗೋಸ್ನ ಮಧ್ಯ ಪ್ರಾಂತ್ಯದಲ್ಲಿ 2 – 11 ವರ್ಷದ ಮಕ್ಕಳಿಗೂ ಕೊರೊನಾ ಲಸಿಕೆ ನೀಡಲು ಆರಂಭಿಸಲಾಗಿದೆ.
ಚೀನಾ, ಅರಬ್ ರಾಷ್ಟ್ರ ಹಾಗೂ ವೆನೆಜಿವೆಲಾದಲ್ಲೂ ಕೂಡ ಪುಟ್ಟ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಆದರೆ ಈ ಅಭಿಯಾನ ಮೊದಲು ಆರಂಭಿಸಿದ ಕೀರ್ತಿ ಕ್ಯೂಬಾಗೆ ಸಲ್ಲುತ್ತದೆ.