ಬೆಂಗಳೂರು: ಜಾತಿ ಗಣತಿ ವರದಿ ಬಿಡುಗಡೆಗೆ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ. ಹಿಂದುಳಿದ ವರ್ಗಗಳ ಆಯೋಗ ಕಾಂತರಾಜು ನೇತೃತ್ವದಲ್ಲಿ ನಡೆಸಿದ ಜಾತಿ ಗಣತಿ ವರದಿ ಬಿಡುಗಡೆ ಮಾಡಬಾರದು, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಸಮೀಕ್ಷೆ ಹೆಸರಿನಲ್ಲಿ ನಡೆಸಲಾದ ಜಾತಿಗಣತಿ ವೈಜ್ಞಾನಿಕವಾಗಿಲ್ಲ, ಪಾರದರ್ಶಕವಾಗಿಲ್ಲ, ಸಮಗ್ರವಾಗಿಲ್ಲ ಎಂದು ದೂರಲಾಗಿದೆ.
ವೀರಶೈವ ಲಿಂಗಾಯಿತರಿಂದ ಉಪಜಾತಿಗಳನ್ನು ಉದ್ದೇಶಪೂರ್ವಕವಾಗಿ ಬೇರ್ಪಡಿಸಲಾಗಿದ್ದು, ಈ ವರದಿಯಿಂದ ವೀರಶೈವ ಲಿಂಗಾಯತರಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಹಿಂದುಳಿದವರಿಗೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ.
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಸಂಖ್ಯೆ ನಮ್ಮಲ್ಲಿ ಹೆಚ್ಚಾಗಿದೆ. ಜಾತಿಗಣತಿ ಬಿಡುಗಡೆಯಿಂದ ಲಕ್ಷಾಂತರ ನಿರುದ್ಯೋಗಿ ಯುವಕರಿಗೆ, ಅವಕಾಶ ವಂಚಿತರಿಗೆ ಅನ್ಯಾಯವಾಗಲಿದೆ ಎಂದು ದೂರಲಾಗಿದೆ.
ಸಮೀಕ್ಷೆಯ ಅಂಶಗಳು ಸೋರಿಕೆಯಾಗಿವೆ. ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಬದಲು ಕೇವಲ ಜಾತಿವಾರು ಸಂಖ್ಯೆಯನ್ನು ವ್ಯವಸ್ಥಿತವಾಗಿ ಸೃಷ್ಟಿಸಲಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದ್ದು, ಜಾತಿ ಆಧಾರದ ಮೇಲೆ ಸಮಾಜ ಒಡೆಯುವ ಹುನ್ನಾರವಿದೆ ಎಂದು ಆರೋಪಿಸಲಾಗಿದೆ.