ಸ್ವಾತಂತ್ರ್ಯೋತ್ಸವದ 75ನೇ ಮಹೋತ್ಸವದ ಪ್ರಯುಕ್ತ 75 ವರ್ಷ ಮೇಲ್ಪಟ್ಟ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಿಂದ ವಿನಾಯಿತಿ ನೀಡುವ ಕೇಂದ್ರ ಸರ್ಕಾರದ ಘೋಷಣೆ 2021-22ರ ವಿತ್ತೀಯ ವರ್ಷದಿಂದಲೇ ಅನುಷ್ಠಾನಕ್ಕೆ ಬರಲಿದೆ.
ಈ ಸಡಿಲಿಕೆಯು ಪ್ರಸಕ್ತ ವಿತ್ತೀಯ ವರ್ಷವಾದ 2021-22ರಿಂದ ಮಾತ್ರವೇ ಜಾರಿಗೆ ಬರಲಿದೆ. ಈ ವರ್ಷದ ತೆರಿಗೆ ಫೈಲಿಂಗ್ ಅನ್ನು ಮುಂದಿನ ವರ್ಷ ಮಾಡಬೇಕಿದೆ. ಇದೇ ವೇಳೆ, 2020-21ರ ವಿತ್ತೀಯ ವರ್ಷದ ತೆರಿಗೆ ಫೈಲಿಂಗ್ ಅನ್ನು ಸೆಪ್ಟೆಂಬರ್ 30, 2021ರ ಒಳಗೆ ಮಾಡಬೇಕಿದ್ದು, ಈ ವೇಳೆ ಮೇಲ್ಕಂಡ ಅನುಕೂಲವು ಹಿರಿಯ ನಾಗರಿಕರಿಗೆ ಸಿಗುವುದಿಲ್ಲ.
ಈ ಸಂಬಂಧ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ನಿಯಮಗಳನ್ನು ಗೊತ್ತುಪಡಿಸಿದ್ದು, ಬ್ಯಾಂಕುಗಳು ಪಾಲಿಸಬೇಕಾದ ಹೊಸ ನಿಯಮಗಳು ಹಾಗೂ ಭರ್ತಿ ಮಾಡಬೇಕಾದ ಅರ್ಜಿಗಳ ಬಗ್ಗೆ ಸ್ಪಷ್ಟನೆ ಕೊಟ್ಟಿದೆ.
ಅಚ್ಚರಿಗೊಳಿಸುತ್ತೆ ಈತ ಮಾಡಿರುವ ʼಗಿನ್ನಿಸ್ʼ ದಾಖಲೆ
“ಕೇವಲ ಪಿಂಚಣಿ ಹಾಗೂ ಅದರ ಮೇಲಿನ ಬಡ್ಡಿಯನ್ನು ಆದಾಯದ ರೂಪದಲ್ಲಿ ಹೊಂದಿರುವ ಹಿರಿಯ ನಾಗರಿಕರಿಗೆ, ಅವರ ಆದಾಯ ತೆರಿಗೆ ಫೈಲಿಂಗ್ನಿಂದ ವಿನಾಯಿತಿ ನೀಡಲು ನಾನು ಪ್ರಸ್ತಾವನೆ ಮಾಡುತ್ತೇನೆ. ಸಂಬಂಧ ಪಟ್ಟ ಬ್ಯಾಂಕ್ ಅವರ ಆದಾಯದಲ್ಲಿ ತೆರಿಗೆ ಹಿಡಿದುಕೊಳ್ಳುತ್ತದೆ” ಎಂದು 2021ರ ಕೇಂದ್ರ ಬಜೆಟ್ ಮಂಡನೆ ಮೇಲೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.
ಐಟಿಆರ್ ಫೈಲಿಂಗ್ನಿಂದ ವಿನಾಯಿತಿ ಪಡೆಯಬೇಕಾದಲ್ಲಿ ಈ ಷರತ್ತುಗಳು ಅನ್ವಯಿಸುತ್ತವೆ:
1. ಹಿಂದಿನ ವಿತ್ತೀಯ ವರ್ಷದ ವೇಳೆ 75 ವರ್ಷ ತುಂಬಿರುವ ಹಿರಿಯ ನಾಗರಿಕರು ಭಾರತ ವಾಸಿಗಳಾಗಿರಬೇಕು.
2. ಹಿರಿಯ ನಾಗರಿಕರಿಗೆ ಇತರೆ ಯಾವುದೇ ರೀತಿಯ ಆದಾಯ ಇರಬಾರದು.
3. ಬ್ಯಾಂಕುಗಳು ಕೇಂದ್ರ ಸರ್ಕಾರದಿಂದ ಗೊತ್ತುಪಡಿಸಿದ ಪಟ್ಟಿಯಲ್ಲಿರಬೇಕು.
4. ಸಂಬಂಧಪಟ್ಟ ಬ್ಯಾಂಕ್ಗೆ ಫಲಾನುಭವಿಗಳು ತಮ್ಮ ಘೋಷಪತ್ರ ನೀಡಬೇಕು.
ಹಿರಿಯ ನಾಗರಿಕರಿಗೆ ಐಟಿಆರ್ ಫೈಲಿಂಗ್ನಿಂದ ಮಾತ್ರವೇ ವಿನಾಯಿತಿ ನೀಡಲಾಗಿದೆ. ತಮ್ಮ ಪಾಲಿನ ತೆರಿಗೆಯನ್ನು ಅವರು ಕಟ್ಟಲೇಬೇಕಾಗುತ್ತದೆ.
“ಹಿರಿಯ ನಾಗರಿಕರೊಬ್ಬರು ಕಟ್ಟಬೇಕಾದ ತೆರಿಗೆಯನ್ನು ಅವರ ಆದಾಯ ಮೂಲದಿಂದ ಕಡಿತ ಮಾಡುವ ಕೆಲಸವನ್ನು ಅವರ ಬ್ಯಾಂಕ್ ಮಾಡುತ್ತದೆ. ಹೀಗೆ ಮಾಡಬೇಕಾದಲ್ಲಿ ಸಂಬಂಧಪಟ್ಟ ವ್ಯಕ್ತಿಯ ಆದಾಯ ಮೂಲ ಬರೀ ಪಿಂಚಣಿ ಹಾಗೂ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ಮಾತ್ರವೇ ಆಗಿರಬೇಕು ಹಾಗೂ ಇವೆಲ್ಲವನ್ನೂ ಅದೇ ಬ್ಯಾಂಕ್ನಲ್ಲೇ ಪಡೆಯುತ್ತಿರಬೇಕು” ಎಂದು ವಿತ್ತ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಈ ಮುನ್ನ ತಿಳಿಸಿದ್ದರು.