ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮುಂದುವರೆದಿದೆ. ಗರ್ಭಿಣಿ ಪೊಲೀಸ್ ಮಹಿಳೆಯನ್ನು ಆಕೆಯ ಕುಟುಂಬದ ಮುಂದೆಯೇ ಗುಂಡಿಕ್ಕಿ ಕೊಂದಿರುವ ಘಟನೆ ಘೋರ್ ಪ್ರಾಂತ್ಯದಲ್ಲಿ ನಡೆದಿದೆ.
6 ತಿಂಗಳ ಗರ್ಭಿಣಿಯಾಗಿದ್ದ ನಿಗಾರಾಳನ್ನು ಆಕೆಯ ಪತಿ ಹಾಗೂ ಮಕ್ಕಳ ಮುಂದೆಯೇ ಗುಂಡು ಹಾರಿಸಿ ಹತ್ಯೆಗೈಯಲಾಗಿದೆ. ವರದಿಗಳ ಪ್ರಕಾರ, ಅಫ್ಘನ್ ಮಹಿಳೆಯರು ಇದೀಗ ತಲೆ ಮತ್ತು ದೇಹದ ಹೊದಿಕೆಗಳನ್ನು ಖರೀದಿ ಮಾಡಲು ಶುರು ಮಾಡಿದ್ದಾರಂತೆ. ಹಿಜಾಬ್ ಅಥವಾ ಬುರ್ಖಾ ಧರಿಸದೇ ಇದ್ದಲ್ಲಿ ತಾಲಿಬಾನಿಗಳ ದೌರ್ಜನ್ಯಕ್ಕೆ ಗುರಿಯಾಗುವ ಭಯ ಅಲ್ಲಿನ ಮಹಿಳೆಯರನ್ನು ಕಾಡುತ್ತಿದೆ.
ಯುದ್ಧದಿಂದ ಹಾನಿಗೊಳಗಾದ ದೇಶದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದ ನಂತರ ಕೆಲವು ಅಫ್ಘನ್ ಮಹಿಳೆಯರು, ಮಹಿಳಾ ಪ್ರಾತಿನಿಧ್ಯ ಹಾಗೂ ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ತಾಲಿಬಾನ್ ಆಡಳಿತದ ಅಡಿಯಲ್ಲಿ ದೇಶದ ರಾಜಕೀಯ ವ್ಯವಸ್ಥೆಯಿಂದ ಮಹಿಳೆಯರನ್ನು ಹೊರಗಿಡುವುದರ ವಿರುದ್ಧ ಪ್ರತಿಭಟನಾಕಾರರು (ಮಹಿಳೆಯರು) ಘೋಷಣೆಗಳನ್ನು ಕೂಗುವುದರ ಬ್ಯಾನರ್ ಹಿಡಿದುಕೊಂಡು ಧರಣಿ ನಡೆಸಿರುವುದಾಗಿ ವರದಿಯಾಗಿದೆ.