ನ್ಯೂಯಾರ್ಕ್: ’ಐಡಾ’ ಚಂಡಮಾರುತದ ಹಾವಳಿಯಿಂದಾಗಿ ಅಮೆರಿಕದ ನ್ಯೂಜೆರ್ಸಿಯಲ್ಲಿ ಉಂಟಾಗಿರುವ ಪ್ರವಾಹಕ್ಕೆ ನಾಲ್ವರು ಭಾರತೀಯ ಮೂಲದವರು ಬಲಿಯಾಗಿದ್ದಾರೆ. 46 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಮಾಲತಿ ಕಾಂಚೆ ಮತ್ತು ಅವರ 15 ವರ್ಷದ ಮಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.
ಕಾರಿನಲ್ಲಿ ಮನೆಗೆ ಮರಳುತ್ತಿದ್ದ ಮಾಲತಿ ಹಾಗೂ ಅವರ ಮಗಳು, ಪ್ರವಾಹದ ರಭಸಕ್ಕೆ ಹೆದರಿದ್ದರು. ಇದೇ ವೇಳೆ ಅವರ ಕಾರು ಬ್ರಿಜ್ವಾಟರ್ ಬಳಿಯ ಹಳ್ಳವೊಂದಕ್ಕೆ ಇಳಿಯಿತು.
ಕೊಚ್ಚಿ ಹೋಗುತ್ತಿದ್ದ ಕಾರಿನಿಂದ ಕಷ್ಟಪಟ್ಟು ಇಳಿದ ಇಬ್ಬರೂ ಸಮೀಪದ ಮರವೊಂದನ್ನು ಅಪ್ಪಿಕೊಂಡು ಆಶ್ರಯ ಪಡೆದಿದ್ದರು. ಆದರೆ ಗಾಳಿಯ ವೇಗಕ್ಕೆ ಕೆಲವೇ ಸಮಯದಲ್ಲಿ ಮರ ಕೂಡ ಬುಡಸಮೇತ ಕಿತ್ತು ಬಂದಿದೆ. ಬಳಿಕ ಮಾಲತಿ ಹಾಗೂ ಅವರ ಮಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಕುಟುಂಬಸ್ಥರೊಬ್ಬರು ಹೇಳಿದ್ದಾರೆ.
ʼಸಾಲʼ ಪಡೆಯುವ ಮುನ್ನ ನಿಮಗೆ ತಿಳಿದಿರಲಿ ಈ ಎಲ್ಲ ಮಾಹಿತಿ
ಇನ್ನೊಂದೆಡೆ, ದಕ್ಷಿಣ ಪ್ಲೆ ಎನ್ ಫೀಲ್ಡ್ ನಲ್ಲಿ 31 ವರ್ಷದ ಧನುಷ್ ರೆಡ್ಡಿ ಅವರು ಆಯತಪ್ಪಿ ದೊಡ್ಡ ಚರಂಡಿಯೊಂದರಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾರೆ. ಹಲವು ಕಿ.ಮೀ. ದೂರದಲ್ಲಿ ಅವರ ಮೃತದೇಹವು ಪೊಲೀಸರಿಗೆ ಸಿಕ್ಕಿದೆ. ಸೌತ್ ಪ್ಲೆ ಎನ್ ಫೀಲ್ಡ್ ನಲ್ಲಿ ತಾರಾ ರಾಮ್ಸ್ಕ್ರೀತ್ಸ್ ಮತ್ತು ಅವರ 22 ವರ್ಷದ ಮಗ ನಿಕ್ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ. 2005ರಲ್ಲಿ ಅಪ್ಪಳಿಸಿದ್ದ ಕತ್ರಿನಾ ಚಂಡಮಾರುತದ ಅಬ್ಬರದ ನಂತರ ನ್ಯೂಜೆರ್ಸಿಯಲ್ಲಿ ಈ ಬಾರಿ ’ಐಡಾ’ ಹಾವಳಿ ಜೋರಿದೆ. ನ್ಯೂಯಾರ್ಕ್, ಲೂಸಿಯಾನ, ನ್ಯೂಜೆರ್ಸಿ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಇದುವರೆಗೂ 65ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಆ.29ರಂದು ಲೂಸಿಯಾನದ ಪೋರ್ಟ್ ಫೋರ್ಶೌನ್ ಬಳಿ ಐಡಾ ಚಂಡಮಾರುತ ಮೊದಲು ಅಪ್ಪಳಿಸಿತ್ತು. ಐಡಾದಿಂದಾಗಿ ಒಟ್ಟಾರೆ 3.6 ಲಕ್ಷ ಕೋಟಿ ರೂ. ಮೊತ್ತದ ಆಸ್ತಿಗೆ ಹಾನಿಯಾಗಿದೆ ಎಂದು ಅಮೆರಿಕ ಸರಕಾರ ಹೇಳಿದೆ.