ಕೊರೊನಾ ವಿಶ್ವದ ಪರಿಸ್ಥಿತಿಯನ್ನು ಬದಲಿಸಿದೆ. ಕೊರೊನಾದಿಂದ ಸಾಕಷ್ಟು ಬದಲಾವಣೆಯಾಗಿದೆ. ಒಂದುವರೆ ವರ್ಷದ ನಂತ್ರ ಮತ್ತೆ ಶಾಲೆಗಳ ಬಾಗಿಲು ತೆರೆಯುತ್ತಿದೆ. ಮಕ್ಕಳು ಶಾಲೆಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಆದರೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಈಗ್ಲೂ ಪಾಲಕರು ಹೆದರುತ್ತಿದ್ದಾರೆ. ಕೊರೊನಾ ಮತ್ತೆ ಹೆಚ್ಚಾಗ್ತಿರುವುದು ಇದಕ್ಕೆ ಕಾರಣವಾಗಿದೆ.
ಈ ಮಧ್ಯೆ, ಒಂದುವರೆ ವರ್ಷದ ನಂತ್ರ ಶಾಲೆಗೆ ಹೋಗ್ತಿರುವ ಮಕ್ಕಳು ಅನೇಕ ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕೊರೊನಾ ಮಕ್ಕಳ ಮನಸ್ಸಿನ ಮೇಲೂ ಪ್ರಭಾವ ಬೀರಿದೆ. ಮನೆಯಲ್ಲಿಯೇ ಇದ್ದ ಮಕ್ಕಳಲ್ಲಿ ಕಿರಿಕಿರಿ ಮತ್ತು ಕೋಪ ಮೊದಲಿಗಿಂತ ಹೆಚ್ಚು ಕಾಣ್ತಿದೆ. ಇಂಥ ಪರಿಸ್ಥಿತಿಯಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಭಾವನಾತ್ಮಕ ಶಕ್ತಿ ನೀಡುವ ಜವಾಬ್ದಾರಿ ಪಾಲಕರ ಮೇಲಿದೆ.
ಒಂಟಾರಿಯೊದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಕೊರೊನಾ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅಂತರಾಷ್ಟ್ರೀಯ ಅಧ್ಯಯನದಲ್ಲಿ ಸಂಶೋಧಕರು 549 ಕುಟುಂಬಗಳು ಮತ್ತು 1098 ಮಕ್ಕಳ ಮೇಲೆ ಸಂಶೋಧನೆ ನಡೆಸಿದ್ದಾರೆ.
ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಕುಟುಂಬಗಳು ಹಲವು ಒತ್ತಡಗಳನ್ನು ಎದುರಿಸಿದ್ದವು. ಕೆಲವರು ಉದ್ಯೋಗ ಕಳೆದುಕೊಂಡಿದ್ದರೆ, ಮತ್ತೆ ಕೆಲವರ ಕೌಟುಂಬಿಕ ಸಂಬಂಧ ಹಾಳಾಗಿತ್ತು. ಇನ್ನು ಕೆಲವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹಿರಿಯರು ಮಾತ್ರವಲ್ಲ ಮಕ್ಕಳು ಕೂಡ ಎಲ್ಲಾ ಮಾನಸಿಕ ತೊಂದರೆಗಳನ್ನು ಅನುಭವಿಸಿದ್ದಾರೆ. ಈ ಎಲ್ಲಾ ತೊಂದರೆಗಳ ನಡುವೆ, ಪೋಷಕರು ತಮ್ಮ ಮಕ್ಕಳಿಗೆ ಭಾವನಾತ್ಮಕ ಬೆಂಬಲವನ್ನು ನೀಡಲು ವಿಫಲರಾಗುತ್ತಿದ್ದಾರೆ. ಭಾವನಾತ್ಮಕ ಬೆಂಬಲ ಪಡೆದ ಮಕ್ಕಳು, ಶಾಲೆಯಲ್ಲಿ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಪಾಲಕರಿಂದ ಬೆಂಬಲ ಸಿಗದ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆಂದು ಅಧ್ಯಯನದಲ್ಲಿ ಹೇಳಲಾಗಿದೆ.
ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಮಕ್ಕಳಿಗೆ ಭಾವನಾತ್ಮಕ ತರಬೇತಿಯನ್ನು ನೀಡುವುದು ಅಗತ್ಯ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಮೊದಲು ಮಗುವಿನ ಮಾನಸಿಕ ಸಮಸ್ಯೆಯನ್ನು ಗುರುತಿಸುವುದು ಅಗತ್ಯ. ಕೊರೊನಾ ಅಪಾಯ ಮುಗಿದಿಲ್ಲ. ಸುತ್ತಮುತ್ತಲಿನ ಸುದ್ದಿಗಳು ಮಕ್ಕಳಿಗೆ ಭಯ ಹುಟ್ಟಿಸುತ್ತವೆ. ಮಕ್ಕಳ ಭಯವನ್ನು ಹೋಗಲಾಡಿಸಿ ಆ ಸಮಯದಲ್ಲಿ ಮಗುವಿಗೆ ಭಾವನಾತ್ಮಕ ಬೆಂಬಲ ನೀಡುವ ಅಗತ್ಯವಿದೆ. ಮಗುವಿನೊಂದಿಗೆ ಮಾತನಾಡಬೇಕು. ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಇದರ ನಂತರ ಮಗುವಿನ ಜೊತೆ ಸಕಾರಾತ್ಮಕವಾಗಿ ಮಾತುಕತೆ ನಡೆಸಬೇಕು.