ಬೆಂಗಳೂರು: ಸೈಟ್, ಮನೆ ಖರೀದಿಸುವವರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ನೀಡಲಾಗಿದೆ. ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಲು ಕ್ರಮ ಕೈಗೊಳ್ಳುವ ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಚೇತರಿಕೆ ನೀಡಲು ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆಗೆ ತೀರ್ಮಾನಿಸಲಾಗಿದೆ.
ದರ ಇಳಿಕೆಯಿಂದ ನೋಂದಣಿ ವ್ಯವಹಾರ ಹೆಚ್ಚಲಿದ್ದು, ಸರ್ಕಾರಕ್ಕೆ ಆದಾಯ ನಿರೀಕ್ಷಿಸಲಾಗಿದೆ. ಸ್ಥಿರಾಸ್ತಿ ಮಾರಾಟಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಇಳಿಕೆ ಮಾಡಲು ನಿರ್ಧರಿಸಿದೆ.
ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಆರ್. ಅಶೋಕ್ ಅವರು, ರಾಜ್ಯದಲ್ಲಿ ಸ್ಥಿರಾಸ್ತಿ ನೋಂದಣಿ ಕುಸಿದಿದ್ದು, ಹೆಚ್ಚಿನವರು ಕ್ರಯಪತ್ರ ನೋಂದಣಿ ಮಾಡುತ್ತಿಲ್ಲ. ಈ ಉದ್ದೇಶದಿಂದ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿ ನೋಂದಣಿ ಹೆಚ್ಚಳಕ್ಕೆ ಉತ್ತೇಜನ ನೀಡಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.