ಬೆಂಗಳೂರು: ಇದೇ ಸೆಪ್ಟೆಂಬರ್ 20 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(CET) ಫಲಿತಾಂಶ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಳೆದ ಅಗಸ್ಟ್ 28-29 ಮತ್ತು 30ರಂದು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ ಪ್ರಕ್ರಿಯೆಯನ್ನು ಯಾವುದೇ ಗೊಂದಲ-ಸಮಸ್ಯೆ ಇಲ್ಲದೆ ಪೂರ್ಣಗೊಳಿಸಲಾಗುವುದು ಎಂದರು.
ಸಕಾಲಕ್ಕೆ ಫಲಿತಾಂಶ ನೀಡುವುದೂ ಸೇರಿ ನಿಗದಿತ ವೇಳಾಪಟ್ಟಿಯಂತೆ ಕೌನ್ಸಿಲಿಂಗ್ ಮುಗಿಸಲಾಗುವುದು. ಯಾವುದೇ ಕಾರಣಕ್ಕೂ ಶೈಕ್ಷಣಿಕ ವರ್ಷ ಹಳಿತಪ್ಪಲು ಬಿಡುವುದಿಲ್ಲ ಎಂದರು ಸಚಿವರು.
ಶುಲ್ಕದ ಬಗ್ಗೆ ಮುಂದಿನ ವಾರ ಸಭೆ:
ಎಂಜಿನಿಯರಿಂಗ್ ಕಾಲೇಜು ಶುಲ್ಕ ಹೆಚ್ಚಳ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು; ಈ ಬಗ್ಗೆ ಮುಂದಿನ ವಾರ ಸಭೆ ಇದೆ. ಅದರಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲ ಅಂಶಗಳ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.