ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನ ಟೋಯಿಂಗ್ ಮಾಡುವಾಗ ಸ್ಥಳದಲ್ಲಿ ವಾಹನದ ಮಾಲೀಕರಿದ್ದರೆ ನೋ ಪಾರ್ಕಿಂಗ್ ಶುಲ್ಕ ಮಾತ್ರ ಪಡೆದು ಬಿಟ್ಟುಬಿಡಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಪೊಲೀಸರಿಗೆ ಸೂಚಿಸಿದ್ದಾರೆ.
ಟೋಯಿಂಗ್ ಸಿಬ್ಬಂದಿಗಳಿಂದ ಸಾರ್ವಜನಿಕರಿಗೆ ಕಿರುಕುಳದ ಬಗ್ಗೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಹೆಚ್ಚುವರಿ ಆಯುಕ್ತ ಸಂಚಾರ ವಿಭಾಗದ ರವಿಕಾಂತೇಗೌಡ ಅವರೊಂದಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ಟ್ರಾಫಿಕ್ ಪೊಲೀಸರು ಇನ್ಮುಂದೆ ವಾಹನ ಹೊತ್ತೊಯ್ಯುವ ವೇಳೆ ಮಾಲೀಕರು ಸ್ಥಳದಲ್ಲಿದ್ದರೆ ನೋ ಪಾರ್ಕಿಂಗ್ ಶುಲ್ಕ ಮಾತ್ರ ವಿಧಿಸಬೇಕು. ಟೋಯಿಂಗ್ ಮಾಡುವಂತಿಲ್ಲ ಎಂದು ಸೂಚಿಸಿದರು.
ಟೋಯಿಂಗ್ ಮಾಡುವ ಸಂದರ್ಭದಲ್ಲಿ ಸಿಬ್ಬಂದಿಗಳು ಎಲ್ಲಾ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಯಾವುದೇ ವಾಹನಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.