ಇಡಾ ಚಂಡಮಾರುತವು ಉಂಟು ಮಾಡಿದ ಪ್ರವಾಹ ಪರಿಸ್ಥಿತಿಯಲ್ಲಿ ನ್ಯೂಯಾರ್ಕ್ನಲ್ಲಿ ರಾತ್ರೋರಾತ್ರಿ ಕನಿಷ್ಟ 41 ಮಂದಿಯನ್ನು ಬಲಿ ಪಡೆದಿದೆ.
ಹ್ಯುರಿಕೇನ್ ಇಡಾ ಚಂಡಮಾರುತದ ಬಳಿಕ ನ್ಯೂಯಾರ್ಕ್ನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಯಾರ್ಕ್ನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಇದರಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪರಿಸ್ಥಿತಿ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಿದೆ. ನ್ಯೂಯಾರ್ಕ್ ನಗರದಲ್ಲಿ ರಸ್ತೆಗಳಲ್ಲಿ ನೀರು ತುಂಬಿ ಹರಿದಿತ್ತು ಕಟ್ಟಡಗಳು, ಎಲೆಕ್ಟ್ರಿಕ್ ಕಂಬಗಳು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ.
ನ್ಯೂಯಾರ್ಕ್ನ ಜನತೆ ಇತಿಹಾಸದಲ್ಲೇ ಕಂಡು ಕೇಳರಿಯದ ಪ್ರಮಾಣದಲ್ಲಿ ಪ್ರವಾಹಕ್ಕೆ ಸಾಕ್ಷಿಯಾಗಿದ್ದಾರೆ. ಪ್ರವಾಹ ಪರಿಸ್ಥಿತಿಯಿಂದಾಗಿ ನೆಲ ಮಾಳಿಗೆಗಳು ಸಂಪೂರ್ಣ ಜಲಾವೃತಗೊಂಡಿವೆ. ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದು, ನನಗೀಗ 50 ವರ್ಷ ವಯಸ್ಸಾಗಿದ್ದು ನನ್ನ ಜೀವಿತಾವಧಿಯೆಲ್ಲ ನಾನು ನ್ಯೂಯಾರ್ಕ್ನಲ್ಲೇ ಕಳೆದಿದ್ದಾನೆ. ಇಷ್ಟೊಂದು ದಾಖಲೆ ಪ್ರಮಾಣ ಮಳೆಯನ್ನು ನಾನು ನೋಡಿಯೇ ಇರಲಿಲ್ಲ. ನಾನು ಕಾಡಿನಲ್ಲಿದ್ದೇನೆ ಎಂದು ನನಗೆ ಭಾಸವಾಗುತ್ತಿದೆ. ಈ ವರ್ಷ ಎಲ್ಲವೂ ವಿಚಿತ್ರ ಘಟನೆಗಳೇ ನಡೆಯುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಜನತೆಗೆ ಧೈರ್ಯ ತುಂಬುವ ಕೆಲಸ ಮಾಡಿದ್ದು, ಈ ಪರಿಸ್ಥಿತಿಯಲ್ಲಿ ನಾವೂ ನಿಮ್ಮೊಂದಿಗಿದ್ದೇವೆ. ದೇಶ ನಿಮ್ಮ ಸಹಾಯಕ್ಕಿದೆ ಎಂದು ಹೇಳಿದ್ದಾರೆ.
ಪ್ರವಾಹದಿಂದಾಗಿ ನ್ಯೂಜೆರ್ಸಿ ಹಾಗೂ ನ್ಯೂಯಾರ್ಕ್ನ ಮುಖ್ಯ ರಸ್ತೆಗಳು ಬಂದ್ ಆಗಿವೆ. ಅಗ್ನಿಶಾಮಕದಳ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ಥಳೀಯ ಮಾಧ್ಯಮದ ಮಾಹಿತಿಯ ಪ್ರಕಾರ ನ್ಯೂಜೆರ್ಸಿಯಲ್ಲಿ ಕನಿಷ್ಟ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹೆಚ್ಚಿನ ಸಂಖ್ಯೆಯ ಜನರು ವಾಹನದೊಳಗೆ ಸಿಲುಕಿ ಸಾವನ್ನಪ್ಪಿದವರೇ ಇದ್ದಾರೆ ಎಂದು ಅಂದಾಜಿಸಲಾಗಿದೆ.