ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಅವರು ಹೇಳುವ ಮೂಲಕ ರಾಜ್ಯ ಬಿಜೆಪಿ ನಾಯಕತ್ವದಲ್ಲಿ ಗೊಂದಲ ಇಲ್ಲವೆಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಈ ಮೂಲಕ ಯಡಿಯೂರಪ್ಪ ನಂತರವೂ ಲಿಂಗಾಯತರಿಗೆ ರಾಜ್ಯ ಬಿಜೆಪಿ ನೇತೃತ್ವ ಎನ್ನುವುದು ನಿಚ್ಚಳವಾಗಿದೆ. ದಾವಣಗೆರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ತಮ್ಮ ಭಾಷಣದುದ್ದಕ್ಕೂ ಬಿಜೆಪಿ ನಾಯಕ ಯಡಿಯೂರಪ್ಪ ಅವರನ್ನು ಹಾಡಿಹೊಗಳಿದ್ದಾರೆ. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ವಿಕಾಸಯುಗ ಆರಂಭವಾಯಿತು. ಅವರೇ ಸ್ವಂತ ನಿರ್ಧಾರದಿಂದ ಹೊಸ ನಾಯಕತ್ವಕ್ಕೆ ಜವಾಬ್ದಾರಿ ನೀಡಿದ್ದಾರೆ ಎಂದು ಹೇಳಿದ ಅಮಿತ್ ಶಾ, ರಾಜ್ಯದಲ್ಲಿ ಎರಡು ಪವರ್ ಸೆಂಟರ್ ಇಲ್ಲ. ಬೊಮ್ಮಾಯಿ ಅವರೇ ಏಕೈಕ ಶಕ್ತಿಕೇಂದ್ರ ಎನ್ನುವುದು ಸಂದೇಶವನ್ನು ಕೂಡ ನೀಡಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಗೊಂದಲವಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಅವರು ಸಂದೇಶ ರವಾನಿಸಿದ್ದು, ಮುಖ್ಯಮಂತ್ರಿ ಹುದ್ದೆ ಬದಲಾಗುವುದಿಲ್ಲ. ಯಡಿಯೂರಪ್ಪನವರ ಮಾರ್ಗದರ್ಶನ, ಸಲಹೆ ಪಡೆಯಲಾಗುತ್ತದೆ ಎಂಬ ಸಂದೇಶವನ್ನೂ ನೀಡಿದ್ದಾರೆ.