ಆಸ್ಟ್ರೇಲಿಯಾ ಪ್ರವಾಸಕ್ಕೆ ಆಗಮಿಸಿರುವ ಭಾರತೀಯ ವನಿತೆಯರ ಕ್ರಿಕೆಟ್ ತಂಡ, ಕೋವಿಡ್-19 ಸುರಕ್ಷತಾ ಮಾರ್ಗಸೂಚಿಯಂತೆ ಬ್ರಿಸ್ಬೇನ್‌ನ ಪುಟ್ಟದೊಂದು ಹೊಟೇಲ್‌ನಲ್ಲಿ 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕಿದೆ.
ಸರ್ಕಾರೀ ಪ್ರಾಯೋಜಿತ ಕೋಣೆಗಳು ಬಹಳ ಚಿಕ್ಕದಿದ್ದು, ಆಟಗಾರರು ಹೇಗೋ ಕಷ್ಟಪಟ್ಟು ತಾಲೀಮು ಮಾಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಕೋಣೆಗಳು ಬಹಳ ಕಿರಿದಾಗಿವೆ. ನಿಮಗೆ ಸುತ್ತ ಓಡಾಡಿಕೊಂಡು ತಾಲೀಮು ಮಾಡಲು ಕಷ್ಟವಾಗುತ್ತದೆ. ಬ್ರಿಟನ್‌ನಲ್ಲಿ ಇದ್ದಂತೆ ಗಾರ್ಡ್‌ಗಳ ಸೇವೆ ಇಲ್ಲಿ ಇಲ್ಲ. ಆದರೆ ಇಲ್ಲಿ ಬಹಳ ಸ್ಟ್ರಿಕ್ಟ್. ನಮಗೆ ಕೊಡುತ್ತಿರುವ ಆಹಾರ ಓಕೆ ಆದರೆ ಪ್ರತಿನಿತ್ಯ ಮೆನುವಿನಲ್ಲಿ ಬದಲಾವಣೆಯಾಗುತ್ತದೆ. ಈ ಎರಡು ವಾರಗಳು ಬಹಳ ಸವಾಲಿನದ್ದಾಗಿರಲಿವೆ,” ಎಂದು ಅಧಿಕಾರಿ ತಿಳಿಸಿದ್ದಾರೆ.
ಬ್ರಿಟನ್ ಪ್ರವಾಸಕ್ಕೆ ಹೋಗುವ ಮುನ್ನ ಮುಂಬಯಿಯಲ್ಲಿ ಎರಡು ವಾರಗಳ ಕ್ವಾರಂಟೈನ್ ಮಾಡಿದ್ದ ಆಟಗಾತಿಯರಿಗೆ ಅಲ್ಲಿ ಇಷ್ಟೆಲ್ಲಾ ಕಟ್ಟುಪಾಡುಗಳು ಇರಲಿಲ್ಲ.
ಕೋವಿಡ್-19 ನಿರ್ಬಂಧಗಳ ಕಾರಣದಿಂದ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿಯಲ್ಲಿ ಮಾರ್ಪಾಡುಗಳಾಗಿರುವ ಕಾರಣ ಸಿಡ್ನಿ, ಪರ್ತ್, ಮೆಲ್ಬರ್ನ್‌ಗಳ ಬದಲಿಗೆ ಬ್ರಿಸ್ಬೇನ್‌ಗೆ ಆಗಮಿಸಿರುವ ವನಿತೆಯರ ತಂಡ ಆತಿಥೇಯರ ವಿರುದ್ಧ ಮೂರು ಏಕದಿನ ಪಂದ್ಯಗಳು, ಒಂದು ಹಗಲು-ರಾತ್ರಿ ಟೆಸ್ಟ್ ಹಾಗೂ ಮೂರು ಟಿ-20 ಪಂದ್ಯಗಳನ್ನು ಆಡಲಿದೆ.
ಎರಡು ದಿನ ತಡವಾಗಿ ಆರಂಭವಾಗಲಿರುವ ಸರಣಿಯ ಎಲ್ಲಾ ಪಂದ್ಯಗಳನ್ನು ಕ್ವೀನ್ಸ್‌ಲೆಂಡ್‌ನಲ್ಲಿ ಆಡಲಾಗುವುದು.
ಹೊಸ ವರ್ಷ ಹೊಸ ಜೋಶ್ ನಲ್ಲಿ ಟೀಂ ಇಂಡಿಯಾ
ಕೋವಿಡ್-19 ಸಂಬಂಧ ಅತ್ಯಂತ ಕಠಿಣ ನಿರ್ಬಂಧಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾದ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಮಾತ್ರವಲ್ಲದೇ, ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದಲ್ಲಿ ಭಾಗಿಯಾಗಲು ಬಂದಿದ್ದ ಆಟಗಾರರೂ ಸಹ ಇದೇ ರೀತಿ ಎರಡು ವಾರಗಳ ಕಠಿಣ ಕ್ವಾರಂಟೈನ್ ಪೂರೈಸಿದ್ದಾರೆ.