ಆಸ್ಸಾಂನ ಓರಾಂಗ್ ರಾಷ್ಟ್ರೀಯ ಉದ್ಯಾನವನದ ಹೆಸರು ಬದಲಾವಣೆ ಕುರಿತಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
ಓರಾಂಗ್ ರಾಷ್ಟ್ರೀಯ ಉದ್ಯಾನವನಕ್ಕೆ ಮರುನಾಮಕರಣ ಮಾಡೋದಿಲ್ಲ ಬದಲಾಗಿ ಅದರ ಮೂಲ ಹೆಸರನ್ನೇ ಮತ್ತೆ ಇಡೋದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಯಾವುದೇ ರಾಷ್ಟ್ರೀಯ ಉದ್ಯಾನವನಕ್ಕೆ ವ್ಯಕ್ತಿಯ ಹೆಸರನ್ನು ಇಡಲಾಗಿಲ್ಲ. ಆದರೆ 2005ರಲ್ಲಿ ಕಾಂಗ್ರೆಸ್ ಸರ್ಕಾರ ಈ ರೀತಿ ಉದ್ಯಾನವನದ ಹೆಸರನ್ನು ಬದಲಾಯಿಸುವ ಮೂಲಕ ಸ್ಥಳೀಯರ ಭಾವನೆಗೆ ಅಗೌರವ ತಂದಿದೆ ಎಂದು ಹೇಳಿದ್ರು.
ಟ್ವಿಟರ್ನಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಆಸ್ಸಾಂ ಸಿಎಂ ಶರ್ಮಾ, ಓರಂಗ್ ರಾಷ್ಟ್ರೀಯ ಉದ್ಯಾನವನಕ್ಕೆ ಮರುನಾಮಕರಣ ಮಾಡುತ್ತಿಲ್ಲ. 2005ಕ್ಕೂ ಮುನ್ನ ಆಸ್ಸಾಂನ ಯಾವುದೇ ರಾಷ್ಟ್ರೀಯ ಉದ್ಯಾನವನಗಳಿಗೆ ವ್ಯಕ್ತಿಯ ಹೆಸರು ಇರಲಿಲ್ಲ. ಆದರೆ ಈ ನಿಯಮವನ್ನು ಮುರಿದ ಅಂದಿನ ಕಾಂಗ್ರೆಸ್ ಸರ್ಕಾರ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹೆಸರನ್ನು ಈ ಪಾರ್ಕ್ಗೆ ಇಟ್ಟಿದೆ ಎಂದು ಬರೆದಿದ್ದಾರೆ.
ಆಸ್ಸಾಂ ಸದನದಲ್ಲಿ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವನ್ನು ಹುಲಿ ಸಂರಕ್ಷಿತ ಪ್ರದೇಶವಾದ ಒರಾಂಗ್ ರಾಷ್ಟ್ರೀಯ ಉದ್ಯಾನವನ ಎಂದು ಹೆಸರು ಬದಲಾಯಿಸಲು ನಿರ್ಧರಿಸಿದ ಬಳಿಕ ಶರ್ಮಾ ಈ ಪ್ರತಿಕ್ರಿಯೆ ನೀಡಿದ್ದಾರೆ.