ನವದೆಹಲಿ: ಅಡುಗೆ ಅನಿಲ ದರ ಪರಿಷ್ಕರಣೆ, ಸರಕು ಮತ್ತು ಸೇವಾ ತೆರಿಗೆ ಹಾಗೂ ಬ್ಯಾಂಕಿಂಗ್ ನಿಯಮಗಳು, ಪಿಎಫ್ ನಿಯಮಗಳು ಸೇರಿದಂತೆ ಸೆಪ್ಟೆಂಬರ್ 1 ರಿಂದ ಜನರ ದೈನಂದಿನ ಜೀವನದ ಮೇಲೆ ಬದಲಾವಣೆ ತರುವ ಕೆಲವು ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ
ಪ್ರತಿ ತಿಂಗಳು ಅಡುಗೆ ಅನಿಲ ಸಿಲಿಂಡರ್ ದರವನ್ನು ಪರಿಷ್ಕರಣೆ ಮಾಡಲಾಗುತ್ತಿದ್ದು, ಸೆಪ್ಟೆಂಬರ್ ನಲ್ಲಿ ಕೂಡ ಎಲ್.ಪಿ.ಜಿ. ದರ ಪರಿಷ್ಕರಣೆಯಾಗಲಿದೆ. ಆಗಸ್ಟ್ 18 ರಂದು ಗ್ಯಾಸ್ ಸಿಲಿಂಡರ್ ಗೆ 25 ರೂ. ಹೆಚ್ಚಳವಾಗಿದ್ದು ಕಳೆದ ಜನವರಿಯಿಂದ 165 ರೂಪಾಯಿ ಜಾಸ್ತಿಯಾಗಿದೆ. ಈಗ ಮತ್ತೊಮ್ಮೆ ದರ ಪರಿಷ್ಕರಣೆ ಆಗುವುದರಿಂದ ಸಿಲಿಂಡರ್ ದರ ಏರಿಕೆಯಾಗಿ 1000 ರೂ.ಗೆ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನು ಸೆಪ್ಟೆಂಬರ್ 1 ರಿಂದ ಇಪಿಎಫ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯಾಗಿರದಿದ್ದರೆ ಕಾರ್ಮಿಕರ ಖಾತೆಗೆ ಉದ್ಯೋಗದಾತರು ವಂತಿಗೆ ಪಾವತಿಸಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ, ಚಂದಾದಾರರು ಪಿಎಫ್ ಸೇರಿದಂತೆ ಇತರೆ ಸೌಲಭ್ಯ ಪಡೆದುಕೊಳ್ಳಲು ಆಗುವುದಿಲ್ಲ ಎಂದು ಹೇಳಲಾಗಿದೆ.
ಸರಕು ಮತ್ತು ಸೇವಾ ತೆರಿಗೆ GSTR ಗೆ ಸಂಬಂಧಿಸಿದ ನಿಯಮ ಸೆಪ್ಟೆಂಬರ್ ನಿಂದ ಬದಲಾವಣೆಯಾಗಲಿದೆ. ಸರಕು ಮತ್ತು ಸೇವಾ ತೆರಿಗೆ ನೆಟ್ ವರ್ಕ್ ಹೊಸ ನಿಯಮದ ಅನ್ವಯ GSTR 3ಬಿ ನಮೂನೆಯನ್ನು ಸಲ್ಲಿಸದ ತೆರಿಗೆದಾರರಿಗೆ GSTR -1 ಸಲ್ಲಿಸಲು ಅವಕಾಶ ಇರುವುದಿಲ್ಲ ಎನ್ನಲಾಗಿದೆ.
ಇನ್ನು ಬ್ಯಾಂಕ್ ವಂಚನೆ ತಡೆಯಲು ಚೆಕ್ ಕ್ಲಿಯರೆನ್ಸ್ ನಿಯಮವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತಷ್ಟು ಬಿಗಿಗೊಳಿಸಿದೆ. ಇದಕ್ಕಾಗಿ ಪಾಸಿಟಿವ್ ಪೇ ವ್ಯವಸ್ಥೆಯನ್ನು ಜಾರಿಗೆ ತರಲು ಸುತ್ತೋಲೆ ಹೊರಡಿಸಲಾಗಿದ್ದು, 50 ಸಾವಿರ ರೂ. ಗಿಂತ ದೊಡ್ಡ ಮೊತ್ತದ ಚೆಕ್ ಕೊಡುವ ಗ್ರಾಹಕರು ಬ್ಯಾಂಕಿಗೆ ಮೊದಲೇ ಮಾಹಿತಿ ನೀಡಬೇಕು. ಇಲ್ಲವಾದರೆ ಚೆಕ್ ಅಮಾನ್ಯವಾಗುತ್ತದೆ. ಅನೇಕ ಬ್ಯಾಂಕುಗಳಲ್ಲಿ ಈಗಾಗಲೇ ನಿಯಮ ಜಾರಿಯಲ್ಲಿದ್ದು, ಆಕ್ಸಿಸ್ ಬ್ಯಾಂಕ್ ನಲ್ಲಿ ಸೆಪ್ಟಂಬರ್ 1 ರ ಇಂದಿನಿಂದ ಜಾರಿಗೆ ಬರಲಿದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆದಾರರು ಸೆಪ್ಟೆಂಬರ್ 30 ರೊಳಗೆ ಆಧಾರ್ ಸಂಖ್ಯೆಗೆ ಪಾನ್ ನಂಬರ್ ಜೋಡಣೆ ಮಾಡಿಸಬೇಕಿದೆ. ಇಲ್ಲದಿದ್ದರೆ ಗ್ರಾಹಕ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎನ್ನಲಾಗಿದೆ.