ಭಾರತೀಯ ಶೈಲಿಯ ಸೆಣಬಿನ ಮಂಚವನ್ನು ನ್ಯೂಜಿಲ್ಯಾಂಡ್ ನಲ್ಲಿ ಬರೋಬ್ಬರಿ 41,297 ರೂ. ಗೆ ಮಾರಾಟಕ್ಕೆ ಇಡಲಾಗಿದ್ದು, ಹಲವರ ಹುಬ್ಬೇರಿಸಿದೆ. ನ್ಯೂಜಿಲ್ಯಾಂಡ್ ನ ಬ್ರಾಂಡ್ ಅನ್ನಾಬೆಲ್ಸ್ ಸೆಣಬಿನ ಮಂಚವನ್ನು NZD 800ಕ್ಕೆ (ಸುಮಾರು 41,297 ರೂ.) ಮಾರಾಟ ಮಾಡಲಾಗುತ್ತಿದೆ ಎಂದು ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ.
ವೆಬ್ ಸೈಟ್ ನಲ್ಲಿ ಇದೊಂದು ಭಾರತೀಯ ರೀತಿಯ ಸಾಂಪ್ರದಾಯಿಕ ಮಂಚ ಎಂದು ವಿವರಿಸಿದೆ. ಇದರ ಮೂಲಬೆಲೆ NZD 1200 ( ಸುಮಾರು 61,980 ರೂ.). ಆದಾಗ್ಯೂ ರಿಯಾಯಿತಿ ದರದಲ್ಲಿ ರೂ. 41, 297 ಕ್ಕೆ ಲಭ್ಯವಿದೆ ಎಂದು ಹೇಳಲಾಗಿದೆ.
ನಾಲ್ಕು ಕಾಲುಗಳ ಸೆಣಬಿನ ಹಾಸಿಗೆಯನ್ನು ಚಾರ್ಪಾಯಿ ಮರದ ಚೌಕಟ್ಟು ಹಾಗೂ ನೈಸರ್ಗಿಕ ನಾರು ಹಗ್ಗಗಳಿಂದ ತಯಾರಿಸಲ್ಪಟ್ಟಿದೆ. ಇಂದಿನ ದಿನಗಳಲ್ಲಿ ಲೋಹದ ಚೌಕಟ್ಟು ಹಾಗೂ ಪ್ಲಾಸ್ಟಿಕ್ ಟೇಪ್ ಗಳನ್ನು ಹೊಂದಿರುವ ಮಂಚಗಳನ್ನು ಸಹ ಕಾಣಬಹುದು. ಭಾರತದಲ್ಲಿ ಇಂತಹ ಮಂಚಕ್ಕೆ 800 ರಿಂದ 10,000 ರೂ.ಗಳವರೆಗೆ ಲಭ್ಯವಿದೆ. ಸದ್ಯ, ಈ ಉತ್ಪನ್ನ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ.
ದಿನನಿತ್ಯದ ಸರಳ ಬಳಕೆಯ ಉತ್ಪನ್ನವು ಅಧಿಕ ಬೆಲೆಗೆ ಮಾರಾಟವಾಗುತ್ತಿರುವ ಮಾಹಿತಿಯು ನೆಟ್ಟಿಗರ ಗಮನ ಸೆಳೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ, ಐಷಾರಾಮಿ ಫ್ಯಾಷನ್ ಬ್ರಾಂಡ್ ಬಾಲೆನ್ಸಿಯಾಗಾ ಶಾಪಿಂಗ್ ಬ್ಯಾಗ್ ಅನ್ನು 1.5 ಲಕ್ಷ ರೂ. ಗೆ ಮಾರಾಟ ಮಾಡಿ ಬೆರಗುಗೊಳಿಸಿತ್ತು. ದೇಸಿ ಬ್ಯಾಗ್ ಆಗಿರುವ ಇದು ಭಾರತೀಯ ಮಾರುಕಟ್ಟೆಗಳಲ್ಲಿ ಅತ್ಯಂತ ಕನಿಷ್ಠ ಬೆಲೆಗೆ ಮಾರಾಟವಾಗುತ್ತದೆ ಎಂದು ಹೇಳಲಾಗಿತ್ತು.
https://www.instagram.com/p/CTC2Avpp1Nm/?utm_source=ig_web_copy_link