ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಭಾಗಗಳಲ್ಲಿ ಭಾರಿ ಮಳೆಯಾದ ಪರಿಣಾಮ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಮನೆಯಲ್ಲಿ ಕುಳಿತವರು ಚಹಾ ಕುಡಿಯುತ್ತಾ ಮಳೆಯನ್ನು ಆನಂದಿಸಿದರೆ, ಕೆಲಸಕ್ಕೆಂದು ಹೋದವರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದಾರೆ.
ಈ ಮಧ್ಯೆ ದೆಹಲಿಯ ಫ್ಲೈಓವರ್ ನಿಂದ ಜಲಪಾತದಂತೆ ಮಳೆನೀರು ಸುರಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ವೈರಲ್ ಆಗಿರುವ ಈ ವಿಡಿಯೋಗೆ ಹಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಉಚಿತ ಕಾರು ತೊಳೆಯಲು ಇದು ಸುವರ್ಣಾವಕಾಶ, ದೆಹಲಿಯಲ್ಲಿ ಕಂಡುಬಂದ ಜಲಪಾತ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ. ಇದು ಯಾವ ಪ್ರದೇಶ ಅಂತಾ ವಿಡಿಯೋದಲ್ಲಿ ತೋರಿಸಿಲ್ಲವಾದರೂ ಕೆಲವು ಬಳಕೆದಾರರು ಇದು ವಿಕಾಸ್ ಪುರಿ ಮೇಲ್ಸೇತುವೆಯ ಕೆಳ ಸೇತುವೆಯಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ದೆಹಲಿಯ ಹಲವು ಪ್ರದೇಶಗಳು ಹಾಗೂ ಪಕ್ಕದ ನಗರಗಳಾದ ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್ ಹಾಗೂ ಗುರುಗ್ರಾಮದಲ್ಲಿ ಭಾರಿ ಮಳೆಯಾಗಿದ್ದು, ರಸ್ತೆಗಳ ತುಂಬಾ ಪ್ರವಾಹದಂತೆ ನೀರು ಹರಿಯುತ್ತಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.