19 ವರ್ಷದ ಯುವತಿ 17 ವರ್ಷದ ಅಪ್ರಾಪ್ತನ ಜೊತೆ ಪರಾರಿಯಾಗಿ ಬಳಿಕ ಆತನೊಂದಿಗೆ ವಿವಾಹ ಮಾಡಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿ ನಡೆದಿದೆ. ಅಪ್ರಾಪ್ತನ ತಾಯಿ ನೀಡಿದ ದೂರಿನ ಅಡಿಯಲ್ಲಿ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಯುವತಿಯು ನಗರದ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದಳು. 17 ವರ್ಷದ ಯುವಕ ದ್ವಿತೀಯ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿದ್ದ ಎನ್ನಲಾಗಿದೆ. ಈತ ಪದೇ ಪದೇ ಯುವತಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡುತ್ತಿದ್ದ. ಒಂದು ವರ್ಷದ ಅವಧಿಯಲ್ಲಿ ಯುವತಿಗೆ ಈತನ ಮೇಲೆ ಪ್ರೇಮಾಂಕುರವಾಗಿದೆ. ಗುರುವಾರ ಈ ಯುವತಿಯು ಅಪ್ರಾಪ್ತನ ಜೊತೆ ಪರಾರಿಯಾಗಿದ್ದಳು.
ಇವರಿಬ್ಬರೂ ಕೊಯಂಬತ್ತೂರಿಗೆ ಆಗಮಿಸಿದ್ದರು. ಸೆಮ್ಮೆಡು ಎಂಬಲ್ಲಿ ಇಬ್ಬರೂ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ಸಮಯದಲ್ಲಿ ಯುವತಿಯು ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ದೂರು ದಾಖಲಾಗಿದೆ.
ಅಪ್ರಾಪ್ತನ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಯುವತಿಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ದೂರಿನ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಆರೋಪಿ ಮಹಿಳೆ ಅಪ್ರಾಪ್ತನ ಜೊತೆ ಪೊಲ್ಲಾಚಿಯ ಪೊಲೀಸ್ ಠಾಣೆಗೆ ಹಾಜರಾಗಿದ್ದಾಳೆ. ಪ್ರಸ್ತುತ ಈಕೆಯನ್ನು ಬಂಧನದಲ್ಲಿ ಇಡಲಾಗಿದೆ. ಈಕೆಯ ವಿರುದ್ಧ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.