ಆಗಸ್ಟ್ ತಿಂಗಳು ಮುಗಿತಿದೆ. ಸೆಪ್ಟೆಂಬರ್ ಶುರುವಾಗಲು ಇನ್ನು ಕೆಲವೇ ದಿನಗಳು ಬಾಕಿ ಇದೆ. ಸೆಪ್ಟೆಂಬರ್ ಒಂದರಿಂದ ಜನಸಾಮಾನ್ಯರಿಗೆ ಸಂಬಂಧಿಸಿದ ಕೆಲ ನಿಯಮಗಳಲ್ಲಿ ಬದಲಾವಣೆಯಾಗಲಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೆಪ್ಟೆಂಬರ್ ಒಂದರಿಂದ ಉಳಿತಾಯ ಖಾತೆ ಠೇವಣಿಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲಿದೆ. ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಬ್ಯಾಂಕಿನ ಹೊಸ ಬಡ್ಡಿದರವು ವರ್ಷಕ್ಕೆ ಶೇಕಡಾ 2.90ರಷ್ಟಾಗಲಿದೆ. ಪಿಎನ್ಬಿಯ ಅಸ್ತಿತ್ವದಲ್ಲಿರುವ ಮತ್ತು ಹೊಸ ಉಳಿತಾಯ ಖಾತೆಗಳ ಮೇಲೆ ಹೊಸ ಬಡ್ಡಿದರ ಅನ್ವಯವಾಗಲಿದೆ. ಪ್ರಸ್ತುತ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯ ಬಡ್ಡಿ ದರವು ಪ್ರತಿ ವರ್ಷಕ್ಕೆ ಶೇಕಡಾ 3ರಷ್ಟಿದೆ.
ಪಿಎಫ್ ಖಾತೆ ಹೊಂದಿರುವವರು ಸೆಪ್ಟೆಂಬರ್ ಒಳಗೆ ಮಹತ್ವದ ಕೆಲಸ ಮಾಡಬೇಕಿದೆ. ಸೆಪ್ಟೆಂಬರ್ ನಲ್ಲಿ, ಪಿಎಫ್ ಖಾತೆ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಮೊದಲು, ಮೇ 31ಕ್ಕೆ ಗಡುವು ನೀಡಲಾಗಿತ್ತು. ನಂತ್ರ ಅದನ್ನು ಆಗಸ್ಟ್ 31ರವರೆಗೆ ವಿಸ್ತರಿಲಾಗಿತ್ತು. ಪಿಎಫ್ ಖಾತೆ ಜೊತೆ ಆಧಾರ್ ಲಿಂಕ್ ಆಗದೆ ಹೋದಲ್ಲಿ ಉದ್ಯೋಗಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ.
ತಿಂಗಳ ಮೊದಲ ದಿನ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ಸತತ ಎರಡು ತಿಂಗಳಿಂದ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಸಿಲಿಂಡರ್ ಬೆಲೆ 25 ರೂಪಾಯಿ ಏರಿಕೆ ಕಂಡಿದೆ. ಸೆಪ್ಟೆಂಬರ್ ನಲ್ಲೂ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.
ಸೆಪ್ಟೆಂಬರ್ ನಿಂದ ಜಿಎಸ್ಟಿ ರಿಟರ್ನ್ಸ್ ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ಬರಲಿದೆ. ಜಿಎಸ್ಟಿ ನಿಯಮ 59 (6) ಸೆಪ್ಟೆಂಬರ್ 1, 2021 ರಿಂದ ಜಾರಿಗೆ ಬರಲಿದೆ ಎಂದು ಸರಕು ಮತ್ತು ಸೇವಾ ತೆರಿಗೆ ಜಾಲ ತಿಳಿಸಿದೆ, ಜಿಎಸ್ಟಿಆರ್-3ಬಿ ರಿಟರ್ನ್ಸ್ ಸಲ್ಲಿಸದ ತೆರಿಗೆದಾರರಿಗೆ ಇದು ಜಿಎಸ್ಟಿಆರ್-1 ರಿಟರ್ನ್ಸ್ ಸಲ್ಲಿಸುವುದನ್ನು ನಿರ್ಬಂಧಿಸುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವವರು ಪಾನ್-ಆಧಾರ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಸೆಪ್ಟೆಂಬರ್ 30, 2021 ರೊಳಗೆ ಲಿಂಕ್ ಮಾಡುವಂತೆ ಬ್ಯಾಂಕ್ ಸೂಚನೆ ನೀಡಿದೆ. ಲಿಂಕ್ ಮಾಡದ ಗ್ರಾಹಕರಿಗೆ ವ್ಯವಹಾರದಲ್ಲಿ ತೊಂದರೆಯಾಗಲಿದೆ.
ಒಂದು ದಿನಕ್ಕೆ 50,000 ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಜಮಾ ಮಾಡಲು ಪಾನ್ ಕಡ್ಡಾಯವಾಗಿದೆ. ಆಕ್ಸಿಸ್ ಬ್ಯಾಂಕ್, ಹೊಸ ಚೆಕ್ ಕ್ಲಿಯರೆನ್ಸ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿದೆ. ಬ್ಯಾಂಕ್ ವಂಚನೆಯನ್ನು ತಡೆಗಟ್ಟಲು ಬ್ಯಾಂಕ್ ಈ ನಿಯಮ ಜಾರಿಗೆ ತರಲಿದೆ. ಬ್ಯಾಂಕ್ ಈಗಾಗಲೇ ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡಿದೆ.