ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಮಧ್ಯ ಪ್ರದೇಶದ ಬುಡಕಟ್ಟು ಸಮಾಜದ ಪಾಲಿಗೆ ದೇವತೆ ಇದ್ದಂತೆ ಎಂದು ಹೇಳಿದರೆ ತಪ್ಪಾಗಲಾರದು.
ಏಕೆಂದರೆ ಇಂದಿರಾ ಗಾಂಧಿ ತಮ್ಮ ಅಧಿಕಾರಾವಧಿಯಲ್ಲಿ ಈ ಜನಾಂಗದ ಜನತೆಗೆ ಸಾಕಷ್ಟು ಸವಲತ್ತುಗಳನ್ನ ಒದಗಿಸಿದ್ದಾರೆ.
ಇಲ್ಲಿನ ಜನರೇ ಹೇಳುವಂತೆ ದೇವರು ಪ್ರತ್ಯಕ್ಷನಾಗಿ ಬಂದು ನಮಗೆ ಏನೆಲ್ಲ ವರವನ್ನು ನೀಡಬಹುದಿತ್ತೋ ಅದೆಲ್ಲವನ್ನು ಇಂದಿರಾ ಗಾಂಧಿ ತಮ್ಮ ಅಧಿಕಾರಾವಧಿಯಲ್ಲಿ ಮಾಡಿ ತೋರಿಸಿದ್ದಾರೆ ಎಂದು ಹೇಳುತ್ತಾರೆ.
ಇದೇ ಕಾರಣಕ್ಕಾಗಿ ಮಧ್ಯ ಪ್ರದೇಶದ ಖಾರ್ಗೋನ್ ಜಿಲ್ಲೆಯ ಝಿರ್ನಿಯಾ ಎಂಬ ಪ್ರದೇಶದ ಪಂಡ್ಲಿಯಾ ಗ್ರಾಮದಲ್ಲಿ ಇಂದಿರಾ ಗಾಂಧಿಯವರಿಗಾಗಿ ಬುಡಕಟ್ಟು ಜನಾಂಗದವರು ದೇವಸ್ಥಾನವನ್ನೇ ಕಟ್ಟಿಸಿದ್ದಾರೆ.
ಈ ದೇವಸ್ಥಾನದಲ್ಲಿ ಇಂದಿರಾ ಗಾಂಧಿಯವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ದೇವಸ್ಥಾನದ ಗೋಡೆಯನ್ನು ತ್ರಿವರ್ಣದಿಂದ ಅಲಂಕರಿಸಲಾಗಿದೆ.
ಬುಡಕಟ್ಟು ಜನಾಂಗದವರ ಆಸೆಯಂತೆ ಈ ದೇವಸ್ಥಾನವನ್ನು 1987ರ ಏಪ್ರಿಲ್ 14ರಂದು ಅನುಷ್ಠಾನಗೊಳಿಸಲಾಗಿತ್ತು.
ಅಂದಿನ ಕಾಂಗ್ರೆಸ್ ಶಾಸಕರಾಗಿದ್ದ ಚಿದಾಬಾಯಿ ದಾವರ್ ಎಂಬವರು ಜೈಪುರದಿಂದ ತಂದ ಈ ಇಂದಿರಾಗಾಂಧಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ರು. ಪ್ರಸ್ತುತ ಚಿದಾಬಾಯಿ ದಾವರ್ ಪುತ್ರ ಕೇದಾರ್ ದಾವರ್ ಈ ಕ್ಷೇತ್ರದ ಸ್ವತಂತ್ರ ಶಾಸಕರಾಗಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಶಾಸಕ ಕೇದಾರ್, ಬುಡಕಟ್ಟು ಜನಾಂಗದವರು ಇಂದಿರಾಗಾಂಧಿಯವರನ್ನು ದೇವರಂತೆ ಕಾಣುತ್ತಾರೆ. ಬುಡಕಟ್ಟು ಜನಾಂಗದವರ ಜೀವನವನ್ನೇ ಬದಲಿಸುವಂತಹ ಸಾಕಷ್ಟು ಯೋಜನೆಗಳು ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಜಾರಿಗೆ ಬಂದಿತ್ತು. ಇದೇ ಕಾರಣಕ್ಕೆ ಈ ಜನತೆ ಇಂದಿರಾ ಗಾಂಧಿಯವರನ್ನು ರಾಜಕಾರಣಿಯಾಗಿ ಕಾಣದೇ ದೇವರಂತೆ ಪೂಜಿಸುತ್ತಾರೆ ಎಂದು ಹೇಳಿದ್ರು.