ಮೈಸೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳಲ್ಲಿ 5 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಗ್ಯಾಂಗ್ ರೇಪ್ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದೇ ರಣರೋಚಕ. ಮೈಸೂರು ಗ್ಯಾಂಗ್ ರೇಪ್ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದರೂ ಘಟನೆ ನಡೆದು ಮೂರು ದಿನ ಕಳೆಯುತ್ತಿದ್ದರೂ ಪೊಲೀಸರಿಗೆ ಆರೋಪಿಗಳ ಪತ್ತೆ ಸವಾಲಾಗಿತ್ತು. ಆರೋಪಿಗಳ ಪತ್ತೆಗಾಗಿ ಪೊಲೀಸರು ತಮ್ಮದೇಯಾದ ಸ್ಟ್ರಾಟಜಿ, ಆಕ್ಷನ್ ಪ್ಲಾನ್ ರೂಪಿಸಿ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಾಹನ ಸವಾರರಿಗೆ ಖುಷಿ ಸುದ್ದಿ….! ಬೇರೆ ರಾಜ್ಯಕ್ಕೆ ಹೋದಾಗ ಬೇಕಿಲ್ಲ ಹೊಸ ನೋಂದಣಿ
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ಎಡಿಜಿಪಿ ಪ್ರತಾಪ್ ರೆಡ್ಡಿ ಮಾರ್ಗದರ್ಶನದಲ್ಲಿ ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನೇತೃತ್ವದಲ್ಲಿ ಗ್ಯಾಂಗ್ ರೇಪ್ ಆರೋಪಿಗಳ ಬಂಧನಕ್ಕೆ 5 ತಂಡ ರಚನೆ ಮಾಡಲಾಗಿತ್ತು. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಸೇರಿದಂತೆ 5 ಜಿಲ್ಲೆಗಳ ಪೊಲೀಸ್ ಎಕ್ಸ್ ಪರ್ಟ್ ಗಳು ವಿವಿಧ ಆಯಾಮಗಳಲ್ಲಿ ಪ್ರಕರಣ ಭೇದಿಸಲು ಸಹಾಯ ಮಾಡಿದ್ದರು. ಒಟ್ಟು 26 ಪೊಲೀಸರ ನಿಯೋಜನೆಗೊಂಡಿದ್ದು, ಯಶಸ್ವಿ ಕಾರ್ಯಾಚರಣೆ ಮೂಲಕ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಸಂತ್ರಸ್ತೆ ಸ್ನೇಹಿತ ನೀಡಿದ ಅಲ್ಪ ಮಾಹಿತಿ ಹಾಗೂ ಘಟನಾ ಸ್ಥಳದಲ್ಲಿ ಸಿಕ್ಕ ಬಸ್ ಟಿಕೆಟ್, ಮೊಬೈಲ್ ಟವರ್ ಆಧಾರದ ಮೇಲೆ ತಮಿಳುನಾಡಿನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೃತ್ಯದ ಬಳಿಕ ಸಂತ್ರಸ್ತೆ ಮೊಬೈಲ್ ನ್ನು ಆರೋಪಿಗಳು ಕಿತ್ತುಕೊಂಡು ಹೋಗಿದ್ದು, ಇದೀಗ ಆ ಮೊಬೈಲ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.