ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ರದ್ದು ಮಾಡಬೇಕೆಂದು ಕಳೆದ 9 ತಿಂಗಳಿಂದ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 25 ರಂದು ಭಾರತ್ ಬಂದ್ ಗೆ ಕರೆ ನೀಡಿದೆ.
ಕೇಂದ್ರ ಸರ್ಕಾರದ ನೂತನ ಕೃಷಿ ತಿದ್ದುಪಡಿ ಮಸೂದೆಗಳನ್ನು ರದ್ದು ಮಾಡಬೇಕೆಂದು ಕಳೆದ ವರ್ಷ ನವೆಂಬರ್ ನಲ್ಲಿ ಹೋರಾಟ ಕೈಗೊಳ್ಳಲಾಗಿತ್ತು. ದೆಹಲಿ ಗಡಿಭಾಗದಲ್ಲಿ ನಿರಂತರ ಹೋರಾಟ ಮುಂದುವರೆದಿದ್ದು, ದೇಶಾದ್ಯಂತ ಆಂದೋಲನವನ್ನು ತೀವ್ರಗೊಳಿಸುವ ಉದ್ದೇಶದಿಂದ ಸೆಪ್ಟೆಂಬರ್ 25 ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಆಶಿಶ್ ಮಿತ್ತಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ವರ್ಷ ಸೆಪ್ಟೆಂಬರ್ 25 ರಂದು ದೇಶಾದ್ಯಂತ ಬಂದ್ ನಡೆಸಲಾಗಿತ್ತು. ಈ ವರ್ಷವೂ ಬಂದ್ ಕೈಗೊಂಡಿದ್ದು, ದೇಶವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.