ಕೊರೊನಾ 2ನೆ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ವೈದ್ಯಕೀಯ ಆಮ್ಲಜನಕಕ್ಕೆ ಉಂಟಾದ ಅಭಾವದ ಕಹಿನೆನಪು ಇನ್ನೂ ಮಾಸಿಲ್ಲ. ಸರಿಯಾದ ಸಮಯಕ್ಕೆ ಆಮ್ಲಜನಕ ಸಿಗದೇ ಅದೆಷ್ಟೋ ಮಂದಿ ಕೋವಿಡ್ ಸೋಂಕಿತರು ಪ್ರಾಣ ತೆತ್ತಿದ್ದರು.
ಅದೇ ರೀತಿ ಚೆನ್ನೈನ ಸೀತಾ ಎಂಬವರು ತಮ್ಮ 65 ವರ್ಷದ ತಾಯಿಯನ್ನು ಕೋವಿಡ್ 19 ಹಿನ್ನೆಲೆ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಸಿಗದ ಹಿನ್ನೆಲೆಯಲ್ಲಿ ವೃದ್ಧ ತಾಯಿಯು ಅನೇಕ ಗಂಟೆಗಳ ಕಾಲ ಆಸ್ಪತ್ರೆ ಆವರಣದಲ್ಲೇ ಕಾಯಬೇಕಾದ ಅನಿವಾರ್ಯತೆ ಎದುರಾಗಿತ್ತು.
ತಾಯಿಗೆ ಆಕ್ಸಿಜನ್ ಬೆಡ್ ಹೊಂದಿಸಲು ನಾವು ಬರೋಬ್ಬರಿ 12 ಗಂಟೆಗಳ ಕಾಲ ಕಾಯಬೇಕಾಗಿ ಬಂದಿತ್ತು. ಆಕೆಗೆ ಆಮ್ಲಜನಕದ ಅವಶ್ಯಕತೆ ಇದ್ದಿದ್ದರಿಂದ ನಾವು ಆಂಬುಲೆನ್ಸ್ನಿಂದ ಆಂಬುಲೆನ್ಸ್ಗೆ ಆಕೆಯನ್ನು ಶಿಫ್ಟ್ ಮಾಡುತ್ತಲೇ ಇದ್ದೆವು. ಆದರೆ ಸರಿಯಾದ ಸಮಯಕ್ಕೆ ಸೂಕ್ತ ಚಿಕತ್ಸೆ ಸಿಗದೇ ತಮ್ಮ ತಾಯಿ ಮೃತಪಟ್ಟಿದ್ದಾರೆ ಎಂದು ಸೀತಾ ಹೇಳಿದ್ರು.
ತಮ್ಮ ತಾಯಿಗೆ ಉಂಟಾದ ದುಃಸ್ಥಿತಿ ಇನ್ಯಾರಿಗೂ ಬರಬಾರದು ಎಂಬ ಕಾರಣಕ್ಕೆ 36 ವರ್ಷದ ಸೀತಾ ರೋಗಿಗಳ ಜೀವ ಕಾಪಾಡಲು ಮುಂದಾಗಿದ್ದಾರೆ. ನನ್ನ ತಾಯಿಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಬೆಡ್ ಸಿಕ್ಕಿದ್ದರೆ ಖಂಡಿತವಾಗಿಯೂ ಬದುಕುತ್ತಿದ್ದಳು. ನನ್ನ ತಾಯಿಗಾಗಿ ನಾನು ಪಟ್ಟ ಕಷ್ಟ ಇನ್ಯಾರಿಗೂ ಬರಬಾರದು. ಹೀಗಾಗಿ ನಾನು ಆಸ್ಪತ್ರೆಗಳಿಗೆ ಆಟೋರಿಕ್ಷಾ ಮೂಲಕ ಆಮ್ಲಜನಕ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದು ಸೀತಾ ಹೇಳಿದ್ದಾರೆ.
ಸೀತಾ ಈಗಾಗಲೇ ತಮ್ಮ ಆಕ್ಸಿಜನ್ ಆಟೋರಿಕ್ಷಾ ಮೂಲಕ 800ಕ್ಕೂ ಅಧಿಕ ಮಂದಿಯ ಜೀವ ಕಾಪಾಡಿದ್ದಾರೆ. ಸೀತಾ ಈ ಸೇವನೆಯನ್ನು ಉಚಿತವಾಗಿಯೇ ನೀಡುತ್ತಾರೆ. ಸ್ಟೀಟ್ ವಿಷನ್ ಚ್ಯಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಸೀತಾ ಈ ಚಾರಿಟಿಯ ಮೂಲಕವೇ ಆಕ್ಸಿಜನ್ ಆಟೋ ರಿಕ್ಷಾ ವ್ಯವಸ್ಥೆ ಮಾಡಿದ್ದಾರೆ.