ಬೆಂಗಳೂರು: ಸರ್ಕಾರಿ ಯೋಜನೆಗಳಲ್ಲಿ ಜನಪ್ರತಿನಿಧಿಗಳ ಫೋಟೋ ಹಾಕಿದರೆ ಕೇಸ್ ದಾಖಲಿಸಲಾಗುತ್ತದೆ. ಜನಪ್ರತಿನಿಧಿಗಳ ಫೋಟೋ ತೆರವುಗೊಳಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರ ಮತ್ತು ಸರ್ಕಾರದ ಅಂಗ ಸಂಸ್ಥೆಗಳಿಂದ ನಿರ್ಮಾಣವಾದ ಯೋಜನೆಗಳಲ್ಲಿ ಜನಪ್ರತಿನಿಧಿಗಳ ಫೋಟೋ ಮತ್ತು ಹೆಸರು ಅನಾವರಣಗೊಳಿಸಿದ್ದಲ್ಲಿ ಅವುಗಳನ್ನು ತೆರವುಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಮುಕ್ತ ಸ್ಥಳಗಳ ಕಾಯ್ದೆ 1981 ರ ಪ್ರಕಾರ, ಸರ್ಕಾರಿ ಯೋಜನೆಗಳಲ್ಲಿ ಜನಪ್ರತಿನಿಧಿಗಳ ಜಾಹೀರಾತು ತೆಗೆಯಬೇಕು. ಇಂತಹ ಜಾಹೀರಾತು ಹಾಕದಂತೆ ಕ್ರಮ ಕೈಗೊಳ್ಳಬೇಕು. ಪ್ರಕರಣ ಮರುಕಳಿಸಿದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಅಲ್ಲದೇ, ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಹೈಕೋರ್ಟ್ ಈ ಹಿಂದೆ ವಿಚಾರಣೆ ನಡೆಸಿ ಭಾವಚಿತ್ರ ತೆರವು ಬಗ್ಗೆ ಅಗತ್ಯ ಕ್ರಮ ಕೈಗೊಂಡು ಅನುಪಾಲನಾ ವರದಿ ಸಲ್ಲಿಸಲು ಸೂಚಿಸಿದೆ. ಸುಪ್ರೀಂ ಕೋರ್ಟ್ 2015 ರ ಮೇ 13 ರಂದು ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯ ನ್ಯಾಯಮೂರ್ತಿಗಳು, ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ಹೊರತಾಗಿ ಬೇರೆ ನಾಯಕರ ಫೋಟೋ, ಹೆಸರು ಪ್ರಚುರಪಡಿಸಬಾರದು ಎಂದು ಆದೇಶಿಸಿದೆ.
ಹೀಗಿದ್ದರೂ ಕೂಡ ಅನೇಕರು ಆದೇಶ ಉಲ್ಲಂಘಿಸಿ ಹೆಸರು, ಫೋಟೋ, ಜಾಹೀರಾತು ಪ್ರಕಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.