ಮೂವರು ಮಹಿಳಾ ನ್ಯಾಯಮೂರ್ತಿಗಳೂ ಸೇರಿದಂತೆ ಸುಪ್ರೀಂ ಕೋರ್ಟ್‌ಗೆ 9 ಹೊಸ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ. ಇವರಲ್ಲಿ ಕರ್ನಾಟಕ ಮೂಲದ ನ್ಯಾ. ಬಿ.ವಿ.ನಾಗರತ್ನ ಅವರು ಸೇವಾ ಹಿರಿತನದ ಆಧಾರದಲ್ಲಿ 2027ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ ಇದೆ.
ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾ. ಹಿಮಾ ಕೋಹ್ಲಿ ಮತ್ತು ಗುಜರಾತ್ ಹೈಕೋರ್ಟ್‌ನ ಐದನೇ ಹಿರಿಯ ನ್ಯಾ. ಬೆಲಾ ಎಂ.ತ್ರಿವೇದಿ ಸುಪ್ರೀಂಗೆ ಪದೋನ್ನತಿ ಪಡೆದ ಇತರೆ ಇಬ್ಬರು ಮಹಿಳಾ ನ್ಯಾಯಮೂರ್ತಿಗಳು. ಇವರ ಜತೆಗೆ ಕೇರಳ ಹೈಕೋರ್ಟ್ ನ್ಯಾ.ಸಿ.ಟಿ.ರವಿಕುಮಾರ್ ಮತ್ತು ಮದ್ರಾಸ್ ಹೈಕೋರ್ಟ್ ನ್ಯಾ. ಎಂ.ಎ.ಸುಂದ್ರೇಶ್ ಸುಪ್ರೀಂಕೋರ್ಟ್‌ಗೆ ಪದೋನ್ನತಿ ಪಡೆದಿದ್ದಾರೆ. ಹಿರಿಯ ವಕೀಲ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ನರಸಿಂಹ ಅವರು ಉನ್ನತ ಹುದ್ದೆಗೆ ಅವಕಾಶ ಪಡೆದಿದ್ದಾರೆ.
ವಕೀಲರ ಪರಿಷತ್‌ನಿಂದ ನೇರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ಆರನೇ ಗಣ್ಯರು ಇವರಾಗಿದ್ದಾರೆ. ವಿವಿಧ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಾಗಿದ್ದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಪದೋನ್ನತಿ ಪಡೆದವರ ಪಟ್ಟಿಯಲ್ಲಿ ಅಭಯ್ ಶ್ರೀನಿವಾಸ್ ಓಕಾ (ಕರ್ನಾಟಕ ಹೈಕೋರ್ಟ್), ವಿಕ್ರಮ್ ನಾಥ್ (ಗುಜರಾತ್ ಹೈಕೋರ್ಟ್) ಮತ್ತು ಜಿತೇಂದ್ರ ಕುಮಾರ್ ಮಹೇಶ್ವರಿ (ಸಿಕ್ಕಿಂ ಹೈಕೋರ್ಟ್) ಹೆಸರು ಸೇರಿವೆ. ನೂತನ ನ್ಯಾಯಮೂರ್ತಿಗಳ ನೇಮಕಾತಿ ಪಟ್ಟಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಅಂಕಿತ ಹಾಕಿದ್ದಾರೆ.