ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಭಾರಿ ಸ್ಫೋಟ ಸಂಭವಿಸಿದೆ ಎಂದು ಪೆಂಟಗಾನ್ ಹೇಳಿದೆ.
ವಕ್ತಾರ ಜಾನ್ ಕಿರ್ಬಿ ಅವರು, ಸ್ಫೋಟದಲ್ಲಿ ಸಾವು ನೋವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ತಾಲಿಬಾನ್ ಸ್ವಾಧೀನಕ್ಕೆ ಬಂದ ನಂತರ ಸಾವಿರಾರು ಆಫ್ಘನ್ನರು ದೇಶದಿಂದ ಪಲಾಯನ ಮಾಡಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪ್ರಯತ್ನಿಸುತ್ತಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ದಾಳಿಯ ಸಾಧ್ಯತೆಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದವು.
ಅಮೆರಿಕ ಮತ್ತು ಮಿತ್ರ ಪಡೆಯ ಸೈನಿಕರು, ವಿವಿಧ ದೇಶಗಳ ಸಾವಿರಾರು ನಾಗರಿಕರೊಂದಿಗೆ ಆಫ್ಘನ್ ಜನತೆ ಕೂಡ ದೇಶ ತೊರೆಯಲು ಕಾಬೂಲ್ ವಿಮಾನ ನಿಲ್ದಾಣದ ಬಳಿ ಬೀಡು ಬಿಟ್ಟಿದ್ದಾರೆ. ಆಫ್ಘನ್ನರು ದೇಶ ಬಿಟ್ಟು ಹೋಗದಂತೆ ತಾಲಿಬಾನ್ ಉಗ್ರರು ತಡೆಯೊಡ್ಡಿದ್ದಾರೆ. ಅಲ್ಲದೇ ಅಮೆರಿಕ ಮತ್ತು ಮಿತ್ರಪಡೆಗಳು ಆಗಸ್ಟ್ 31 ರೊಳಗೆ ದೇಶ ಬಿಡುವಂತೆ ತಾಕೀತು ಮಾಡಿದ್ದಾರೆ.
ತಾಲಿಬಾನ್ ಆಳ್ವಿಕೆಯಿಂದ ಪಲಾಯನ ಮಾಡಲು ಹವಣಿಸುತ್ತಿರುವ ಸಾವಿರಾರು ಅಫ್ಘಾನಿಸ್ಥಾನರು ತಂಗಿರುವ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ಗುರುವಾರ ಎಚ್ಚರಿಕೆ ನೀಡಿದ್ದು, ಇದರ ಬೆನ್ನಲ್ಲೇ ಏರ್ಪೋರ್ಟ್ ಬಳಿ ಭಾರಿ ಸ್ಪೋಟ ಸಂಭವಿಸಿದೆ ಎಂದು ವರದಿಯಾಗಿದೆ.
ಅಲ್ಲಿ ಆತ್ಮಾಹುತಿ ಬಾಂಬ್ ದಾಳಿಯ ಬೆದರಿಕೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದರು. ಅದೇ ರೀತಿಯ ದಾಳಿ ನಡೆದಿರಬಹುದೆಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.