ಓಣಂ ಸಂಭ್ರಮಾಚರಣೆಯ ನಡುವೆಯೇ ಕೇರಳದಲ್ಲಿ ಕೊರೊನಾ ದಿನನಿತ್ಯ ಪ್ರಕರಣದ ಸಂಖ್ಯೆಯಲ್ಲಿ 30 ಪ್ರತಿಶತ ಏರಿಕೆ ಕಂಡಿದ್ದು ಕಳೆದ 24 ಗಂಟೆಗಳಲ್ಲಿ 31 ಸಾವಿರಕ್ಕೂ ಅಧಿಕ ಪ್ರಕರಣ ವರದಿಯಾಗಿದೆ. ಅಲ್ಲದೇ ಕಳೆದ 24 ಗಂಟೆಯಲ್ಲಿ 215 ಮಂದಿ ಸಾವನ್ನಪ್ಪಿದ್ದಾರೆ.
ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 31, 445 ಹೊಸ ಪ್ರಕರಣಗಳು ವರದಿಯಾಗಿದೆ, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 38,83,429 ಆಗಿದೆ. ಹಾಗೂ ಇಲ್ಲಿಯವರೆಗೆ ರಾಜ್ಯದಲ್ಲಿ 19, 972 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಎರ್ನಾಕುಲಂ ಜಿಲ್ಲೆಯಲ್ಲಿ ಅತ್ಯಧಿಕ ಅಂದರೆ 4048 ಪ್ರಕರಣಗಳು ವರದಿಯಾಗಿದೆ. ಇನ್ನುಳಿದಂತೆ ತ್ರಿಶುರ್ನಲ್ಲಿ 3865, ಕೋಝಿಕೋಡೆದಲ್ಲಿ 3680, ಮಲಪ್ಪುರಂನಲ್ಲಿ 3502, ಪಾಲಕ್ಕಡ್ನಲ್ಲಿ 2562, ಕೊಲ್ಲಂನಲ್ಲಿ 2479, ಕೊಟ್ಟಾಯಂನಲ್ಲಿ 2050, ಕಣ್ಣೂರಿನಲ್ಲಿ 1930, ಅಲಪ್ಪುಝಾದಲ್ಲಿ 1874, ತಿರುವನಂತಪುರಂನಲ್ಲಿ 1700, ಇಡುಕ್ಕಿಯಲ್ಲಿ 1166, ಪತ್ತನಂತಿಟ್ಟ 1008 ಹಾಗೂ ವಯನಾಡಿನಲ್ಲಿ 962 ಪ್ರಕರಣಗಳು ವರದಿಯಾಗಿದೆ.
ಮುಂದಿನ ನಾಲ್ಕು ವಾರಗಳ ಕಾಲ ಹೆಚ್ಚಿನ ಜಾಗರೂಕತೆ ಅಗತ್ಯ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿಕೆ ನೀಡಿದ ಒಂದು ದಿನದಲ್ಲೇ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಓಣಂ ಸಮಯವಾದ್ದರಿಂದ ಸಾರ್ವಜನಿಕ ಕಾರ್ಯಕ್ರಮಗಳು ಹೆಚ್ಚಾಗೋದ್ರಿಂದ ಮುಂದಿನ 7 – 10 ದಿನದಲ್ಲಿ ಸೋಂಕಿನ ಸಂಖ್ಯೆ ಹೆಚ್ಚೆಚ್ಚು ವರದಿಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಕೇರಳದಲ್ಲಿ ಆಗಸ್ಟ್ 21ರಂದು ಓಣಂ ಆಚರಿಸಲಾಗಿತ್ತು.