ಬಿಜೆಪಿ ಸರ್ಕಾರದ ಆಡಳಿತವು ಹೆಚ್ಚು ದಿನಗಳ ಕಾಲ ನಡೆಯೋದಿಲ್ಲ ಎಂದಿದ್ದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರದ ಮಾಜಿ ಸಚಿವ ಡಿ.ವಿ ಸದಾನಂದ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ ಸಮುದ್ರದ ಮಧ್ಯ ಸಿಲುಕಿದ ಹಡಗು ಎಂದು ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ ಎಂಬ ಹಡಗು ಬಿರುಗಾಳಿಗೆ ಗರಗರನೇ ತಿರುಗುತ್ತಿದೆ. ಅದು ಯಾವಾಗ ಮುಳುಗುತ್ತದೆ ಅನ್ನೋದೂ ಗೊತ್ತಿಲ್ಲ. ಅವರಿಗೆ ಆಕಾಶವೂ ಇಲ್ಲ, ಅಡಿಯೂ ಇಲ್ಲ. ಪಾತಾಳವೂ ಇಲ್ಲ, ದೇವಲೋಕವೂ ಇಲ್ಲ. ಸಿದ್ದರಾಮಯ್ಯಗೆ ವಿರೋಧ ಪಕ್ಷದ ನಾಯಕನಾಗಬೇಕಿತ್ತು. ಗೂಟದ ಕಾರೊಂದು ಬೇಕಿತ್ತು. ಇದಕ್ಕಾಗಿಯೇ ಅವರು ಕುಮಾರಸ್ವಾಮಿಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರು. ಈ ಸ್ಥಾನದಿಂದ ಮೇಲೆ ಹೋಗಲು ಸಿದ್ದರಾಮಯ್ಯಗೆ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ರು.
ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವ್ರು, ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಹೀಗಾಗಿ ಪಕ್ಷ ಏನು ಹೇಳುತ್ತದೆಯೋ ಅದನ್ನು ನಾನು ಮಾಡುತ್ತೇನೆ. ಮತ್ತೆ ಸಚಿವ ಸ್ಥಾನ ಬೇಕೆಂದು ಕೇಳುವುದಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿದ್ರು.
ಡ್ರಗ್ಸ್ ದಂಧೆ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿದ ಡಿವಿಎಸ್, ಕಾನೂನು ಅದರ ಕೆಲಸವನ್ನು ಮಾಡುತ್ತೆ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾದರೆ ಎಷ್ಟೆಲ್ಲ ಸಮಸ್ಯೆಯಾಗಬಹುದು ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಾಗಬೇಕು. ಈ ಭಾವನೆ ಎಲ್ಲರಲ್ಲಿಯೂ ಬರಬೇಕು ಎಂದು ಹೇಳಿದ್ರು.