ನವದೆಹಲಿ: ಮೀಸಲಾತಿ ಕೆನೆಪದರ ನಿಗದಿಗೆ ವಾರ್ಷಿಕ ಆದಾಯವೇ ಮಾನದಂಡವಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇತರೆ ಹಿಂದುಳಿದ ವರ್ಗದವರಲ್ಲಿ ಕೆನೆಪದರ ತೀರ್ಮಾನಿಸಲು ಕೇವಲ ವಾರ್ಷಿಕ ಆದಾಯವನ್ನು ಮಾನದಂಡವವೆಂದು ಪರಿಗಣಿಸಬಾರದೆಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಾರ್ಷಿಕ ಆದಾಯದ ಆಧಾರದ ಮೇಲೆ ಒಂದು ವರ್ಗವನ್ನು ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿಯಿಂದ ದೂರ ಇಡಲಾಗದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಹರಿಯಾಣ ಸರ್ಕಾರ ಹಿಂದುಳಿದ ವರ್ಗದವರಲ್ಲಿ ವಾರ್ಷಿಕ 6 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿದ ಕುಟುಂಬದವರನ್ನು ಕೆನೆಪದರ ಎಂದು ಗುರುತಿಸಿದೆ. ಈ ಅಧಿಸೂಚನೆಯ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಆರ್ಥಿಕ, ಸಾಮಾಜಿಕ ಮತ್ತು ಇತರೆ ಮಾನದಂಡಗಳ ಅಡಿಯಲ್ಲಿ ಕೆನೆಪದರ ಗುರುತಿಸಬೇಕು ಎಂದು 1992 ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ ಎಂದು ಹೇಳಲಾಗಿದೆ.