ಸುಪ್ರೀಂ ಕೋರ್ಟ್ ಆವರಣದಲ್ಲಿ ಕಳೆದ ವಾರ ತನ್ನ ಸ್ನೇಹಿತನ ಜೊತೆ ಸೇರಿ ಬೆಂಕಿ ಹಚ್ಚಿಕೊಂಡಿದ್ದ 24 ವರ್ಷದ ಯುವತಿ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಉತ್ತರ ಪ್ರದೇಶ ಗಾಜಿಪುರದಲ್ಲಿ ವಿದ್ಯಾರ್ಥಿನಿಯಾಗಿದ್ದ ಮೃತ ಯುವತಿ ಆಗಸ್ಟ್ 27ರಂದು ತನ್ನ 27 ವರ್ಷದ ಸ್ನೇಹಿತನ ಜೊತೆ ದೆಹಲಿಗೆ ಆಗಮಿಸಿದ್ದರು. ಇಬ್ಬರೂ ಸುಪ್ರೀಂ ಕೋರ್ಟ್ ಆವರಣದಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು.
ಫೇಸ್ಬುಕ್ನಲ್ಲಿ ಲೈವ್ ಕೂಡ ಬಂದಿದ್ದ ಈ ಯುವತಿ ತನ್ನನ್ನು ಘೋಸಿಯ ಸಂಸದ ಅತುಲ್ ರೈ ಅತ್ಯಾಚಾರ ಮಾಡಿದ್ದಾರೆ, ಆದರೆ ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳು ದೂರಿನ ಸಂಬಂಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪ ಮಾಡಿದ್ದರು.
ಇಬ್ಬರೂ ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆಯೇ ಪೊಲೀಸರು ಸುಪ್ರೀಂಕೋರ್ಟ್ ಗೇಟ್ ಬಳಿಗೆ ಬಂದು ಇಬ್ಬರನ್ನೂ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಯುವತಿ 85 ಪ್ರತಿಶತ ಸುಟ್ಟು ಹೋಗಿದ್ದರೆ ಸ್ನೇಹಿತ 70 ಪ್ರತಿಶತ ಸುಟ್ಟ ಗಾಯಗಳಿಂದ ಬಳಲುತ್ತಿದ್ದನು.
ದೆಹಲಿಯ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಈತ ವಿದ್ಯಾರ್ಥಿ ಮುಖಂಡ ಕೂಡ ಆಗಿದ್ದಾನೆ. ಈತ ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಅಸು ನೀಗಿದ್ದ. ಕೋರ್ಟ್ ಕೇಸ್ನಲ್ಲಿ ಈತ ಯುವತಿಗೆ ಸಹಾಯ ಮಾಡುತ್ತಿದ್ದ ಎಂದು ಮೃತ ಯುವಕನ ಕುಟುಂಬಸ್ಥರು ಹೇಳಿದ್ದಾರೆ.