ಅಕ್ಟೋಬರ್‌ನಲ್ಲಿ ಉತ್ತುಂಗಕ್ಕೇರಲಿದೆ ಎನ್ನಲಾಗುತ್ತಿರುವ ಕೋವಿಡ್-19 ಮೂರನೇ ಅಲೆಯಿಂದ ಪುಟ್ಟ ಮಕ್ಕಳಿಗೆ ಹೆಚ್ಚು ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮಕ್ಕಳ ತಜ್ಞರು, ಆರೈಕೆ ಕೇಂದ್ರಗಳು, ಆಂಬುಲೆನ್ಸ್‌ಗಳು, ವೆಂಟಿಲೇಟರ್‌ಗಳು ಹಾಗೂ ಚಿಕಿತ್ಸಾ ಸಲಕರಣೆಗಳ ತೀವ್ರ ಕೊರತೆ ಇದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ತಜ್ಞರ ಸಮಿತಿಯೊಂದು ವರದಿ ತಯಾರಿಸಿದೆ.
ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ದಾಳಿ ಮಾಡಿದರೆ ಮೇಲ್ಕಂಡ ಎಲ್ಲ ಕ್ರಮಗಳೂ ದೊಡ್ಡ ಸಂಖ್ಯೆಯಲ್ಲಿ ಬೇಕಾಗುತ್ತದೆ ಎಂದು ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ.
ಭವಿಷ್ಯದಲ್ಲಿ ಕೋವಿಡ್ ಸೋಂಕು ವ್ಯಾಪಕವಾದಲ್ಲಿ, ಪ್ರತಿ 100 ಪಾಸಿಟಿವ್ ಕೇಸ್‌ಗಳಿಗೆ 23 ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲು ವ್ಯವಸ್ಥೆ ಮಾಡಬೇಕೆಂದು ನೀತಿ ಆಯೋಗದ ಸದಸ್ಯ ವಿಕೆ ಪೌಲ್ ನೇತೃತ್ವದ ಆಯೋಗವು ಸರ್ಕಾರಕ್ಕೆ ಸಲಹೆ ನೀಡಿತ್ತು.
ಏಪ್ರಿಲ್-ಜೂನ್ ತ್ರೈಮಾಸಿಕದ ಅವಧಿಯಲ್ಲಿ ಕೋವಿಡ್ ಎರಡನೇ ಅಲೆ ಮಾಡಿದ ದಾಂಧಲೆಯಿಂದಾಗಿ, ದೇಶಾದ್ಯಂತ 18 ಲಕ್ಷ ಸಕ್ರಿಯ ಕೋವಿಡ್ ಕೇಸ್ ಗಳಿಂದಾಗಿ, ಅದರ 21.74%ನಷ್ಟು ಮಂದಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯಬಿದ್ದಿತ್ತು. ಅತ್ಯಧಿಕ ಪ್ರಕರಣಗಳು ಕಂಡು ಬಂದ ಹತ್ತು ರಾಜ್ಯಗಳಲ್ಲಿ 2.2% ನಷ್ಟು ಸೋಂಕಿತರು ಐಸಿಯುನಲ್ಲಿ ದಾಖಲಾಗಬೇಕಾಗಿ ಬಂದಿತ್ತು.
ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಸಜ್ಜಾಗುತ್ತಿರುವ ಕೇಂದ್ರ ಸರ್ಕಾರ ಇದಕ್ಕೆಂದೇ 23,123 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಇದೇ ವೇಳೆ ಮಕ್ಕಳ ಆರೈಕೆ ಹಾಗೂ ಶುಶ್ರೂಷೆಗೆ ವಿಶೇಷ ಒತ್ತು ಕೊಡಲಾಗಿದೆ ಎಂದು ಠಾಕೂರ್ ತಿಳಿಸಿದ್ದಾರೆ.