ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ವಲಸೆ ಹೋದ ಮತ್ತು ಗ್ರಾಮೀಣ ಭಾಗದ ಮಕ್ಕಳಿಗೆ ಸಿಹಿ ಸುದ್ದಿ ನೀಡಲಾಗಿದ್ದು, ಶಾಲೆಗೆ ದಾಖಲಾತಿ ಆಗದಿದ್ದರೂ ಸಮೀಪದ ಶಾಲೆಗಳಲ್ಲಿ ಪಾಠ ಕೇಳಬಹುದು ಎಂದು ತಿಳಿಸಿದ್ದಾರೆ. ಮಕ್ಕಳು ಹತ್ತಿರದ ಯಾವುದೇ ಶಾಲೆಗೆ ಹೋಗಿ ಪಾಠ ಕೇಳಬಹುದು. ಶಾಲೆಯಲ್ಲಿ ನಂತರದಲ್ಲಿ ದಾಖಲಾತಿ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ಶಾಲೆ ಆರಂಭ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 30 ರಂದು ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗುವುದು. ಶಾಲೆ ಆರಂಭಿಸುವ ಕುರಿತಾಗಿ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಆಗಸ್ಟ್ 30 ರ ನಂತರ 5 ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು. ವಲಸೆ ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪಾಠ ಕೇಳಲು ಹತ್ತಿರದ ಶಾಲೆಗಳಲ್ಲಿ ಪಾಠ ಕೇಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಇಂದಿನಿಂದ 9, 10ನೇ ತರಗತಿ ಮತ್ತು ಪಿಯುಸಿ ತರಗತಿಗಳು ಆರಂಭವಾಗುತ್ತಿದ್ದು, ಪೋಷಕರು ಸಂತೋಷದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ
ಮಾರ್ಗಸೂಚಿಗಳನ್ನು ಪಾಲಿಸಿ ಶಾಲೆಗಳನ್ನು ಆರಂಭಿಸಲು ಶಾಲೆ ಆಡಳಿತ ಮಂಡಳಿಗಳಿಗೆ, ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ನಿನ್ನೆ ಕೆಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಕೊರೋನಾ ಪಾಸಿಟಿವಿಟಿ ದರ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.