alex Certify ರಕ್ಷಾಬಂಧನ ವಿಶೇಷ: ಬಾಲಿವುಡ್ ಸಹೋದರ – ಸಹೋದರಿಯರ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ಷಾಬಂಧನ ವಿಶೇಷ: ಬಾಲಿವುಡ್ ಸಹೋದರ – ಸಹೋದರಿಯರ ಕುರಿತು ಇಲ್ಲಿದೆ ಮಾಹಿತಿ

ಈ ವರ್ಷ ರಕ್ಷಾ ಬಂಧನದ ಹಬ್ಬವನ್ನು ಆಗಸ್ಟ್ 22 ರಂದು ಆಚರಿಸಲಾಗುತ್ತಿದೆ. ಸಹೋದರ – ಸಹೋದರಿಯರ ನಡುವಿನ ಬಾಂಧವ್ಯದ ಅನುಬಂಧವು ಸಿನಿಮಾದಲ್ಲೂ ಕೂಡ ಬಹಳ ಚೆನ್ನಾಗಿ ಮೂಡಿಬರುತ್ತದೆ. ರೀಲ್ ನಲ್ಲಿ ಮಾತ್ರವಲ್ಲದೆ ಬಾಲಿವುಡ್ ನ ರಿಯಲ್ ಲೈಫ್ ನ ಒಡಹುಟ್ಟಿದವರು ಸಾಮಾನ್ಯರಿಗಿಂತ ಭಿನ್ನವಾಗಿಲ್ಲ. ಒಬ್ಬರಿಗೊಬ್ಬರು ಗುದ್ದಾಡುತ್ತಾರೆ, ಜಗಳವಾಡುತ್ತಾರೆ ಆದರೆ ಪರಸ್ಪರ ಒಬ್ಬರನ್ನೊಬ್ಬರು ಬಿಟ್ಟಿರಲಾರರು. ರಕ್ಷಾ ಬಂಧನದ ಈ ಸಿಹಿಘಳಿಗೆಯಲ್ಲಿ ಬಾಲಿವುಡ್ ನ ಸಹೋದರ-ಸಹೋದರಿಯರು ಯಾರಿದ್ದಾರೆ ಬನ್ನಿ ನೋಡೋಣ..

ಸಾರಾ ಅಲಿಖಾನ್ – ಇಬ್ರಾಹಿಂ ಖಾನ್:

ನಟ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರಿಗೆ ಜನಿಸಿದ ಸಾರಾ ಮತ್ತು ಇಬ್ರಾಹಿಂ ಬಿಟೌನ್ ನ ಅತ್ಯುತ್ತಮ ಸಹೋದರ-ಸಹೋದರಿ ಜೋಡಿಗಳಲ್ಲಿ ಒಬ್ಬರು. ಇವರಿಬ್ಬರು ತಮ್ಮ ಹಾಸ್ಯದ ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಹಂಚಿಕೊಳ್ಳುತ್ತಾರೆ. ಕೊರೋನಾ ಲಾಕ್ ಡೌನ್ ಸಮಯದಲ್ಲಿ ಇವರಿಬ್ಬರು ಎಷ್ಟು ಹತ್ತಿರವಾದರು ಅನ್ನೋ ಬಗ್ಗೆ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾರಾ ವಿವರಿಸಿದ್ದರು. “ಈ ಸಾಂಕ್ರಾಮಿಕವು ನಮಗೆ ಒಟ್ಟಿಗೆ ಇರಲು ಅವಕಾಶ ಮಾಡಿಕೊಟ್ಟಿತು. ಸ್ನೇಹಿತರಂತೆ ನಾವು ಪರಸ್ಪರ ಹಂಚಿಕೊಳ್ಳುತ್ತೇವೆ” ಎಂದು ಸಾರಾ ಹೇಳಿದ್ದರು.

ಅಭಿಷೇಕ್ ಬಚ್ಚನ್ ಹಾಗೂ ಶ್ವೇತಾ ಬಚ್ಚನ್:

ಶ್ವೇತಾ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಅವರು ಬಾಲಿವುಡ್ ನ ಅತ್ಯಂತ ಕ್ಯೂಟ್ ಸೋದರ-ಸೋದರಿ ಜೋಡಿಯಲ್ಲೊಬ್ಬರಾಗಿದ್ದಾರೆ. ಪರಸ್ಪರ ಒಡಹುಟ್ಟಿದವರು ಎಂದು ಕರೆಯುವ ಬದಲು, ಅವರು ಉತ್ತಮ ಸ್ನೇಹಿತರು ಎಂದು ಸಂಬೋಧಿಸಲು ಇಷ್ಟಪಡುತ್ತಾರೆ. ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಶೋ ಕಾಫಿ ವಿತ್ ಕರಣ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡು, ಪರಸ್ಪರರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶ್ವೇತಾ, “ಅಭಿಷೇಕ್ ಅಂದರೆ ತಾಯಿ ಜಯಾ ಬಚ್ಚನ್ ಅವರಿಗೆ ಅಚ್ಚುಮೆಚ್ಚು. ಅಭಿಷೇಕ್ ಪ್ರತಿ ಬಾರಿ ಕೋಣೆಗೆ ಪ್ರವೇಶಿಸಿದಾಗ ಆಕೆಯ ಕಣ್ಣುಗಳು ಬೆಳಗುತ್ತದೆ. ಕಭಿ ಖುಷಿ ಕಭೀ ಗಮ್ ಸಿನಿಮಾದಲ್ಲಿ ಶಾರುಖ್ ಖಾನ್ ಅವರನ್ನು ಕಂಡಾಗ ಹೇಗೆ ಪ್ರತಿಕ್ರಿಯಿಸುತ್ತಾರೋ ಅದೇ ರೀತಿ ಪ್ರತಿಕ್ರಿಯೆ ನೀಡುತ್ತಾರೆ” ಎಂದು ಶ್ವೇತಾ ಹೇಳಿದ್ದರು. ಇನ್ನು “ಶ್ವೇತಾ ಅವರಂದ್ರೆ ತಂದೆ ಅಮಿತಾಬ್ ಗೆ ಬಹಳ ಪ್ರೀತಿ. ಶ್ವೇತಾ ಇದ್ದರೆ ತಂದೆ ಬೇರೆಯವರ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂದು ಅಭಿಷೇಕ್ ಹೇಳಿದ್ದರು.

ರಣಬೀರ್ ಕಪೂರ್ ಮತ್ತು ರಿಧಿಮಾ ಕಪೂರ್:

ರಣಬೀರ್ ಕಪೂರ್ ಮತ್ತು ರಿಧಿಮಾ ಕಪೂರ್ ಕೂಡ ಸುಂದರ ಸೋದರ-ಸೋದರಿಯರಲ್ಲಿ ಒಬ್ಬರು. ಇಬ್ಬರೂ ಕೂಡ ಪರಸ್ಪರ ಒಬ್ಬರಿಗೊಬ್ಬರು ಬಹಳ ಹತ್ತಿರವಾಗಿದ್ದಾರಂತೆ. ಬಾಲ್ಯದ ದಿನಗಳಲ್ಲಿ ರಿಧಿಮಾ ಸಹೋದರನ ಜೊತೆ ಡಬ್ಲ್ಯೂಡಬ್ಲ್ಯೂಇ ಶೈಲಿಯ ಜಗಳಗಳನ್ನು ಮಾಡುತ್ತಿದ್ದರಂತೆ. “ಗೆಳತಿಯರಿಗೆ ಉಡುಗೊರೆ ನೀಡಲು ಬಚ್ಚಲಿನಲ್ಲಿದ್ದ ತನ್ನ ಬಟ್ಟೆಗಳನ್ನು ರಣಬೀರ್ ಕದಿಯುತ್ತಿದ್ದ” ಎಂದು ಸಂದರ್ಶನವೊಂದರಲ್ಲಿ ರಿಧಿಮಾ ಬಹಿರಂಗಪಡಿಸಿದ್ದರು.

ಸೈಫ್ ಅಲಿ ಖಾನ್ ಹಾಗೂ ಸೋಹಾ ಅಲಿ ಖಾನ್:

ತನ್ನ ಸ್ಟಾರ್ ಸಹೋದರ ಚಿತ್ರವನ್ನೊಮ್ಮೆ ಹಂಚಿಕೊಂಡಿದ್ದ ಸೋಹಾ ಅಲಿ ಖಾನ್, ಸೈಫ್ ತನ್ನ ಕೂಲ್ ಬ್ರದರ್ ಎಂದು ಹೇಳಿದ್ದರು. ಜೊತೆಗೆ ಹಿಂದಿನ ದಿನಗಳನ್ನ ಮೆಲುಕು ಹಾಕಿದ್ದರು. ಸಹೋದರ – ಸಹೋದರಿಯರ ಬಗ್ಗೆ ಸಂಬಂಧದ ಬಗ್ಗೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದ ಸೋಹಾ, “ಇದೊಂದು ಉತ್ತಮ ಬಾಂಧವ್ಯವಾಗಿದ್ದು, ಬೇರೆಯದಕ್ಕಿಂತ ಭಿನ್ನವಾಗಿದೆ. ಅದನ್ನು ಪೋಷಿಸಬೇಕು ಹಾಗೂ ಆಚರಿಸಬೇಕು” ಎಂದು ಹೇಳಿದ್ದರು.

ಅರ್ಜುನ್ ಕಪೂರ್ ಹಾಗೂ ಅಂಶುಲಾ ಕಪೂರ್:

ಇವರಿಬ್ಬರೂ ಹೆಚ್ಚಾಗಿ ತಮ್ಮ ಮೋಜಿನ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಇವರಿಬ್ಬರ ನಡುವಿನ ಒಡಹುಟ್ಟಿದ ಸಂಬಂಧಕ್ಕೆ ಸಾಮಾಜಿಕ ಮಾಧ್ಯಮ ಸಾಕ್ಷಿಯಾಗಿದೆ. ಅಂಶುಲಾ ಮಾತ್ರವಲ್ಲದೆ ಸೋನಂ ಕಪೂರ್, ರಿಯಾ ಕಪೂರ್, ಜಾನ್ವಿ ಕಪೂರ್, ಖುಷಿ ಕಪೂರ್ ಸೇರಿದಂತೆ ತನ್ನೆಲ್ಲಾ ಸಹೋದರಿಯರೊಂದಿಗಿನ ವಿಶೇಷ ಬಂಧವನ್ನು ಅರ್ಜುನ್ ಹಂಚಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಹಾಗೂ ಅರ್ಪಿತಾ ಖಾನ್:

ನಟ ಸಲ್ಮಾನ್ ಖಾನ್ ತನ್ನ ಸಹೋದರಿ ಅರ್ಪಿತಾ ಜೊತೆಗಿನ ನಿಕಟ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಸೊಹೈಲ್ ಹಾಗೂ ಅರ್ಬಾಜ್ ಗೆ ಸಲ್ಮಾನ್ ಹತ್ತಿರವಾದರೂ ಕೂಡ ಸಹೋದರಿ ಅರ್ಪಿತಾ ಅಂದ್ರೆ ಸಲ್ಲೂಗೆ ವಿಶೇಷ ಪ್ರೀತಿಯಂತೆ. ಅರ್ಪಿತಾ ಕೂಡ ಆಗಾಗ್ಗೆ ಬಾಲಿವುಡ್ ನ ʼದಬಾಂಗ್ʼ ಖಾನ್ ಜೊತೆಗಿನ ತನ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...