ಬೆಕ್ಕು ಪ್ರಿಯರಿಗೆ ನಮ್ಮಲ್ಲೇನು ಬರಗಾಲವಿಲ್ಲ. ಆದರೆ ಗುಜರಾತ್ ಕಚ್ನಲ್ಲಿರುವ ಈ ಮಾರ್ಜಾಲ ಪ್ರಿಯ ಮಾತ್ರ ಮಿಕ್ಕೆಲ್ಲರಿಗಿಂತ ಡಿಫರೆಂಟ್. ಇವರು ತಾವು ಸಾಕಿರುವ ಬೆಕ್ಕುಗಳಿಗೆಂದೇ ‘ಕ್ಯಾಟ್ ಗಾರ್ಡನ್’ ಎಂಬ ಹೆಸರಿನ ಮನೆಯನ್ನೇ ನಿರ್ಮಿಸಿದ್ದಾರೆ.
ಕಚ್ನ ಗಾಂಧಿಧಾಮ ನಗರದ ನಿವಾಸಿಯಾದ ಉಪೇಂದ್ರ ಗೋಸ್ವಾಮಿ ಎಂಬವರು 500 ಚದರ ಗಜದ ಮನೆಯನ್ನು ಬೆಕ್ಕುಗಳಿಗೆಂದೇ ಮೀಸಲಿಟ್ಟಿದ್ದಾರೆ. 2017ರಲ್ಲಿ ನಿರ್ಮಾಣವಾದ ಕ್ಯಾಟ್ ಗಾರ್ಡನ್ನಲ್ಲಿ ಪ್ರಸ್ತುತ 200 ಬೆಕ್ಕುಗಳು ಆಶ್ರಯ ಪಡೆದಿವೆ. 1994ರಲ್ಲಿ ನಿಧನರಾದ ತಮ್ಮ ಸಹೋದರಿಯ ಸವಿನೆನಪಿಗೆಂದು ಉಪೇಂದ್ರ ಈ ಬೆಕ್ಕಿನ ಮನೆಯನ್ನು ನಿರ್ಮಾಣ ಮಾಡಿದ್ದಾರಂತೆ.
ಬೆಕ್ಕಿನ ಮನೆ ನಿರ್ಮಾಣದ ಬಗ್ಗೆ ಮಾತನಾಡಿದ ಉಪೇಂದ್ರ, ನನ್ನ ಸಹೋದರಿ ನಿಧನರಾದ ಬಳಿಕವೂ ನಾವು ಆಕೆಯ ಜನ್ಮದಿನವನ್ನು ಆಚರಿಸುತ್ತಿದ್ದೆವು. ಒಂದು ದಿನ ಮನೆಗೆ ಬಂದ ಬೆಕ್ಕು ಬರ್ತಡೆ ಕೇಕ್ನ್ನು ತಿಂದಿತ್ತು. ಇದಾದ ಬಳಿಕ ಆ ಬೆಕ್ಕು ನಮ್ಮೊಟ್ಟಿಗೆ ಇರಲು ಆರಂಭಿಸಿತು. ಹೀಗಾಗಿ ನಾವು ಆಕೆ ನಮ್ಮ ಜೊತೆ ಬೆಕ್ಕಿನ ರೀತಿಯಲ್ಲೇ ವಾಸವಿದ್ದಾಳೆ ಎಂದು ನಂಬಿದ್ದೇವೆ ಎಂದು ಹೇಳಿದ್ರು.
ಈ ಬೆಕ್ಕಿನ ಮನೆಯಲ್ಲಿ 4 ಎಸಿ ಕೋಣೆಯಿದೆ ಹಾಗೂ 12 ಹಾಸಿಗೆಗಳಿವೆ. ಇಲ್ಲಿ ಸ್ನಾನಗೃಹ ಹಾಗೂ ಸಣ್ಣ ಥಿಯೇಟರ್ ಕೂಡ ಇದೆ. ಈ ಥಿಯೇಟರ್ನಲ್ಲಿ ಸಂಜೆ ವೇಳೆ ಬೆಕ್ಕುಗಳು ಪ್ರಾಣಿಗೆ ಸಂಬಂಧಿಸಿದ ವಿಡಿಯೋವನ್ನು ನೋಡುತ್ತವೆ. ಬೆಕ್ಕುಗಳಿಗೆ ಮೂರು ಬಾರಿ ತಿನ್ನಲು ನೀಡುತ್ತೇವೆ. ಈ ಬೆಕ್ಕುಗಳಿಗೆಂದೇ ಪ್ರತಿ ತಿಂಗಳು 1.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತೇನೆ ಎಂದು ಹೇಳಿದ್ರು.
ಉಪೇಂದ್ರ ಬೆಕ್ಕುಗಳನ್ನು ತಮ್ಮ ಕುಟುಂಬದ ಅವಿಭಾಜ್ಯ ಅಂಗ ಎಂದೇ ಭಾವಿಸಿದ್ದಾರೆ. ಬೆಕ್ಕುಗಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ. ಉಪೇಂದ್ರರ ಈ ಮಾನವೀಯ ಕಾರ್ಯಕ್ಕೆ ಅಹಮದಾಬಾದ್ನ ಜೀವದಯಾ ಟ್ರಸ್ಟ್ ಕೂಡ ಸಹಾಯ ಮಾಡುತ್ತಿದೆ.