ನವದೆಹಲಿ : ಉಗ್ರವಾದ ಅಥವಾ ಭಯೋತ್ಪಾದನೆ ಬಲದಿಂದ ಸಾಮ್ರಾಜ್ಯವನ್ನು ಕಟ್ಟಲು ಸಾಧ್ಯವಿಲ್ಲ, ಒಂದು ವೇಳೆ ಕಟ್ಟಿದರೂ ಅದು ಹೆಚ್ಚು ಕಾಲ ಇರಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಉಗ್ರರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಗುಜರಾತಿನ ಸೋಮನಾಥ ದೇವಾಯದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಪ್ರಧಾನಿ ಮೋದಿ ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಭಯೋತ್ಪಾದಕ ಶಕ್ತಿಗಳು ಕೆಲ ಕಾಲ ಮಾತ್ರ ಮೆರೆದಾಡಬಹುದು. ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಉಗ್ರ ಮಾರ್ಗ ಅನುಸರಿಸಬಹುದು ಆದರೆ ಅವರ ಅಸ್ತಿತ್ವ ಶಾಶ್ವತವಲ್ಲ. ಭಯೋತ್ಪಾದನೆ ಮೂಲಕ ಸಾಮ್ರಾಜ್ಯವನ್ನು ಕಟ್ಟಲು ಸಾಧ್ಯವೂ ಇಲ್ಲ. ಮಾನವೀಯತೆಯನ್ನು ನಿರಂತರವಾಗಿ ಹತ್ತಿಕ್ಕಲು ಎಂದಿಗೂ ಅಸಾಧ್ಯ ಎಂದು ಹೇಳಿದರು.
ಹಲವು ಬಾರಿ ದಾಳಿಯಾದರೂ, ಹಾನಿಗೀಡಾದರೂ ಸೋಮನಾಥ ದೇವಾಲಯ ಶಾಸ್ವತವಾಗಿ ಉಳಿಯುವಲ್ಲಿ ಸಮರ್ಥವಾಗಿದೆ. ಘಾತುಕ ಶಕ್ತಿ ಹೆಚ್ಚು ಮೆರೆಯಲು ಸಾಧ್ಯವಿಲ್ಲ ಎಂಬುದಕ್ಕೆ ಇದೇ ಉತ್ತಮ ಉದಾಹರಣೆ ಎಂದು ಹೇಳಿದರು.