ಮಧುರೈ: ಇಂಗ್ಲಿಷ್ ನಲ್ಲಿ ಮಾತ್ರ ಉತ್ತರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತಾಕೀತು ಮಾಡಿದೆ. ತಮಿಳುನಾಡು ಸಂಸದರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೀಗೆ ಸೂಚನೆ ನೀಡಿದೆ.
1963 ಅಧಿಕೃತ ಭಾಷಾ ಕಾಯ್ದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ನಿರ್ದೇಶನ ನೀಡಿದೆ. ರಾಜ್ಯ ಸರ್ಕಾರ ಯಾವ ಭಾಷೆಯಲ್ಲಿ ಕೇಂದ್ರ ಸರ್ಕಾರಕ್ಕೆ ಅರ್ಜಿಯನ್ನು ಕಳುಹಿಸುತ್ತದೆಯೋ ಅದೇ ಭಾಷೆಯಲ್ಲಿ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಹೇಳಲಾಗಿದೆ.
ಇಂಗ್ಲಿಷ್ ಪ್ರಾತಿನಿಧ್ಯ ನೀಡಿದ್ದರೆ ಉತ್ತರವನ್ನು ಇಂಗ್ಲಿಷ್ ನಲ್ಲಿ ಮಾತ್ರ ಕೊಡುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎಂ. ಕಿರುಬಾಕರನ್ ಮತ್ತು ಎನ್. ದೊರೆಸ್ವಾಮಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಈ ಕುರಿತಾಗಿ ಲೋಕಸಭೆ ಸದಸ್ಯ ವೆಂಕಟೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನಿರ್ದೇಶನ ನೀಡಿದೆ.
ಗ್ರೂಪ್ ಬಿ ಮತ್ತು ಗ್ರೂಪಿ ಸಿ 780 ಖಾಲಿ ಹುದ್ದೆಗಳ ನೇಮಕಾತಿಗೆ ನಡೆಯುವ ಲಿಖಿತ ಪರೀಕ್ಷೆಗೆ ಪಾಂಡಿಚೇರಿಯಲ್ಲಿ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಿರಲಿಲ್ಲ. ಹೀಗಾಗಿ ಅಕ್ಟೋಬರ್ 9 ರಂದು ಗೃಹ ಸಚಿವಾಲಯಕ್ಕೆ ಪತ್ರ ಬರೆದು ಲಿಖಿತ ಪರೀಕ್ಷೆ ನಡೆಸಲು ಪಾಂಡಿಚೇರಿಯಲ್ಲಿ ಪರೀಕ್ಷಾ ಕೇಂದ್ರ ತೆರೆಯುವಂತೆ ಕೋರಿ ಪತ್ರ ಕಳುಹಿಸಲಾಗಿದೆ. ಗೃಹ ವ್ಯವಹಾರಗಳ ರಾಜ್ಯ ಸಚಿವರು ನವೆಂಬರ್ 9 ರಂದು ಹಿಂದಿಯಲ್ಲಿ ಪತ್ರ ಬರೆದು ಕಳುಹಿಸಿದ್ದಾರೆ. ಆದರೆ, ಅದು ತಮಗೆ ತಿಳಿಯದಂತಾಗಿದೆ. ಹಿಂದಿಯಲ್ಲಿ ಉತ್ತರಿಸುವುದು ಕಾನೂನಿನ ಉಲ್ಲಂಘನೆಯಾಗಿದೆ. ತಮಿಳುನಾಡಿನ ಜನರು ತಮ್ಮ ಕುಂದುಕೊರತೆ ಪರಿಹರಿಸುವಂತೆ ಕೇಂದ್ರಸರ್ಕಾರಕ್ಕೆ ಕಳುಹಿಸಿದ ಪತ್ರಗಳಿಗೆ ಹಿಂದಿಯಲ್ಲಿ ಪ್ರತಿಕ್ರಿಯಿಸುತ್ತಿರುವುದು ಸಂವಿಧಾನದ ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ಸಂಸದ ವೆಂಕಟೇಶ್ ಅರ್ಜಿ ಸಲ್ಲಿಸಿದ್ದರು.
ಹಿಂದಿಯೇತರ ರಾಜ್ಯಗಳ ಸಂಸದರ ಹಕ್ಕು ಉಲ್ಲಂಘನೆಯಾಗುತ್ತದೆ. ತಮಿಳುನಾಡು ಸರ್ಕಾರ, ತಮಿಳುನಾಡಿನ ಸಂಸತ್ ಸದಸ್ಯರು ಮತ್ತು ತಮಿಳುನಾಡಿನ ಜನರಿಗೆ ಹಿಂದಿಯಲ್ಲಿ ಪತ್ರಗಳನ್ನು ಕಳುಹಿಸಬಾರದು. ಇಂಗ್ಲಿಷ್ ನಲ್ಲಿ ಮಾಹಿತಿ ಕೇಳಿದರೆ ಇಂಗ್ಲಿಷ್ ನಲ್ಲಿ ಉತ್ತರ ಕಳುಹಿಸಬೇಕು. ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಬೇಕೆಂದು ಕೋರ್ಟ್ ತಿಳಿಸಿದೆ.
ಮಾತೃಭಾಷೆ ಮುಖ್ಯವಾಗಿದ್ದು, ಮೂಲ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು. ಪ್ರಸ್ತುತ ಇಂಗ್ಲಿಷ್ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಮಾತೃಭಾಷೆಯಲ್ಲಿ ಅರ್ಥವಾದಾಗ ಮಾತ್ರ ವಿವರಣೆ ಪೂರ್ಣವಾಗುತ್ತದೆ. ಸರ್ಕಾರ ಪ್ರತಿ ಭಾಷೆಯ ಮಹತ್ವವನ್ನು ಅರಿತುಕೊಳ್ಳಬೇಕು. ಮಾತ್ರವಲ್ಲ, ಅವುಗಳ ಅಭಿವೃದ್ಧಿಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ತಿಳಿಸಿದೆ.