ಕೊರೊನಾ ಹಿನ್ನಲೆಯಲ್ಲಿ ಯುಎಇ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಯುಎಇಗೆ ಬರುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಭಾರತ, ಪಾಕಿಸ್ತಾನ, ನೈಜೀರಿಯಾ, ಶ್ರೀಲಂಕಾ ಮತ್ತು ನೇಪಾಳದಿಂದ ಬರುವ ಪ್ರಯಾಣಿಕರಿಗೆ ಈ ನಿಯಮಗಳು ಅನ್ವಯವಾಗುತ್ತವೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಈ ದೇಶಗಳಿಂದ ಬರುವ ಪ್ರಯಾಣಿಕರು ಯುಎಇಗೆ ಪ್ರಯಾಣಿಸುವ ಮೊದಲು ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಹೊಸ ನಿಯಮಗಳು ಮಂಗಳವಾರದಿಂದ ಜಾರಿಗೆ ಬಂದಿವೆ. ಯುಎಇ ಪ್ರಯಾಣಿಕರನ್ನು ಪಿಸಿಆರ್ ಕ್ಷಿಪ್ರ ಪರೀಕ್ಷೆಗೆ ಒಳಪಡಿಸಲು ನಿಗದಿತ ವಿಮಾನ ಸಮಯಕ್ಕಿಂತ ಆರು ಗಂಟೆಗಳ ಮೊದಲು ವಿಮಾನ ನಿಲ್ದಾಣಕ್ಕೆ ಬರುವಂತೆ ಕೇಳಿದೆ.
ಯುಎಇ, ಆಗಸ್ಟ್ 3 ರಂದು, ಪ್ರಸ್ತುತ ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ನೈಜೀರಿಯಾ ಮತ್ತು ಉಗಾಂಡಾದಲ್ಲಿ ವಾಸಿಸುವ, ವೀಸಾ ಹೊಂದಿರುವವರಿಗೆ ಆಗಸ್ಟ್ 5 ರಿಂದ ದೇಶಕ್ಕೆ ಮರಳಲು ಅವಕಾಶ ನೀಡುವುದಾಗಿ ಘೋಷಿಸಿತ್ತು. ಪ್ರಯಾಣಿಕರು ಸಮಯಕ್ಕಿಂತ ನಾಲ್ಕು ಗಂಟೆಗಳ ಮುಂಚೆ, ವಿಮಾನ ನಿಲ್ದಾಣವನ್ನು ತಲುಪಬೇಕು.
ಯುಎಇ ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ, ಎಲ್ಲಾ ವಿಮಾನಯಾನ ಸಂಸ್ಥೆಗಳು ಹೊಸ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಮನವಿ ಮಾಡಲಾಗಿದೆ. ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವೆ ವಿಮಾನಯಾನ ಆರಂಭವಾದಾಗಿನಿಂದ, ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಯುಎಇ ನಿವಾಸಿಗಳು ಮತ್ತು ಭಾರತದಲ್ಲಿ ಸಿಲುಕಿರುವ ಉದ್ಯೋಗಿಗಳು, ತಮ್ಮ ಮನೆಗಳಿಗೆ ಮತ್ತು ಕೆಲಸಕ್ಕೆ ಮರಳಲು ಬಯಸುತ್ತಿದ್ದಾರೆ.