
ರಸ್ತೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರಿಗೆ ಸಚಿವಾಲಯ ಹೊಸ ಅಧಿಸೂಚನೆ ಹೊರಡಿಸಿದೆ. ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದ ವ್ಯಕ್ತಿಗೆ 15 ದಿನಗಳ ಒಳಗೆ, ರಾಜ್ಯ ಜಾರಿ ಸಂಸ್ಥೆಗಳು ನೋಟಿಸ್ ಕಳುಹಿಸಬೇಕೆಂದು ಸಾರಿಗೆ ಸಚಿವಾಲಯ ಸೂಚನೆ ನೀಡಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತಿದ್ದುಪಡಿ ಮಾಡಿದ ಮೋಟಾರು ವಾಹನಗಳ ಕಾಯಿದೆ 1989 ರ ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿದೆ. ಎಲೆಕ್ಟ್ರಾನಿಕ್ ಮೇಲ್ವಿಚಾರಣೆ ಮತ್ತು ರಸ್ತೆ ಸುರಕ್ಷತೆಗಾಗಿ, ಚಲನ್ ನೀಡಲು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲಾಗುವುದು ಎಂದು ಸಚಿವಾಲಯ ಟ್ವಿಟ್ ಮಾಡಿದೆ.
ಹೊಸ ನಿಯಮಗಳ ಪ್ರಕಾರ, ಟ್ರಾಫಿಕ್ ಕಾನೂನುಗಳನ್ನು ಜಾರಿಗೊಳಿಸಲು ಎಲೆಕ್ಟ್ರಾನಿಕ್ ಸಾಧನಗಳನ್ನು ಪ್ರಮುಖವಾಗಿ ಬಳಸಲಾಗುವುದು. ಇವುಗಳಲ್ಲಿ ಸ್ಪೀಡ್ ಕ್ಯಾಪ್ಚರ್ ಕ್ಯಾಮೆರಾಗಳು, ಸಿಸಿ ಟಿವಿ ಕ್ಯಾಮೆರಾಗಳು, ಸ್ಪೀಡ್ ಗನ್ಗಳು, ಬಾಡಿ ಮೌಂಟೆಡ್ ಕ್ಯಾಮೆರಾಗಳು, ಮೋಟಾರ್ ಡ್ಯಾಶ್ಬೋರ್ಡ್ ಕ್ಯಾಮೆರಾಗಳು, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ಸಾಧನಗಳು ಇದರಲ್ಲಿ ಸೇರಿವೆ.
ರಾಜ್ಯ ಸರ್ಕಾರಗಳು ಟ್ರಾಫಿಕ್ ಕಾನೂನುಗಳನ್ನು ಅನುಸರಿಸುವ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಜ್ಯ ಹೆದ್ದಾರಿಗಳ ಹೆಚ್ಚಿನ ಅಪಾಯದ ಮತ್ತು ಅತ್ಯಂತ ಬಿಡುವಿಲ್ಲದ ರಸ್ತೆಗಳಲ್ಲಿ ಅಳವಡಿಸಲಿದೆ. ಇದರ ಹೊರತಾಗಿ, ಕನಿಷ್ಠ ಒಂದು ಮಿಲಿಯನ್ ಜನಸಂಖ್ಯೆ ಹೊಂದಿರುವ ಎಲ್ಲಾ ಪ್ರಮುಖ ನಗರಗಳ ಪ್ರಮುಖ ಛೇದಕಗಳು ಮತ್ತು ವೃತ್ತಗಳಲ್ಲಿ ಈ ಸಾಧನಗಳನ್ನು ಅಳವಡಿಸಲಾಗುವುದು ಎಂದು ಹೇಳಲಾಗಿದೆ.