ಅದಾನಿ ಸಮೂಹದ ಅನೇಕ ಸಂಸ್ಥೆಗಳ ಶೇರುಗಳ ಮೌಲ್ಯ ಕಳೆದ ಮೂರು ತಿಂಗಳಿನಿಂದ ಕುಸಿಯುತ್ತಾ ಸಾಗಿದೆ. ದೇಶದ ಎರಡನೇ ಸಿರಿವಂತ ಉದ್ಯಮ ಸಮೂಹದ ಆರು ಕಂಪನಿಗಳ ಶೇರುಗಳ ಮೌಲ್ಯಗಳಲ್ಲಿ 52% ಇಳಿಕೆ ಕಂಡು ಬಂದಿದೆ.
ಮೂರು ತಿಂಗಳ ಹಿಂದೆ ಇದೇ ಅದಾನಿ ಸಮೂಹದ ಸಂಸ್ಥೆಗಳ ಶೇರುಗಳ ಮೌಲ್ಯ 52 ವಾರಗಳಲ್ಲೇ ಅತ್ಯಂತ ಹೆಚ್ಚಾಗಿತ್ತು. ಮಿಂಚಿನ ಓಟದಲ್ಲಿದ್ದ ಅದಾನಿ ಸಮೂಹಕ್ಕೆ ಒಂದೇ ಒಂದು ಘಟನೆಯಿಂದ ಹಣೆಬರಹವೇ ಬದಲಾದಂತಿದೆ.
ಉದಾಹರಣೆಗೆ, ಅದಾನಿ ಪವರ್‌ನ ಶೇರುಗಳು ಜೂನ್ 9ರಂದು 167.1 ರೂ.ನಷ್ಟಿದ್ದಿದ್ದು, ಆಗಸ್ಟ್ 18ರ ವೇಳೆಗೆ 77.30 ರೂ.ಗೆ ಕುಸಿದಿದೆ. ಕಳೆದ ಮೂರು ತಿಂಗಳಲ್ಲಿ ಇದೇ ರೀತಿ ಅದಾನಿ ಸಮೂಹದ ಇನ್ನಷ್ಟು ಕಂಪನಿಗಳ ಶೇರುಗಳಲ್ಲಿ ಕುಸಿತ ಕಾಣುತ್ತಿದೆ.
ಅಡಾನಿ ಗ್ಯಾಸ್ ಶೇರುಗಳ ಮೌಲ್ಯ 37.5% ಕುಸಿತ ಕಂಡಿದ್ದು, ಅಡಾನಿ ಟ್ರಾನ್ಸ್‌ಮಿಶನ್ 33.9% ಮಷ್ಟು ಕುಸಿತ ಕಂಡಿವೆ. ಅಡಾನಿ ಗ್ರೀನ್ ಎನರ್ಜಿ 32.6%ರಷ್ಟು ಮಾರುಕಟ್ಟೆ ಮೌಲ್ಯ ಕಳೆದುಕೊಂಡಿದ್ದರೆ, ಅಡಾನಿ ಬಂದರುಗಳು ಹಾಗೂ ವಿಶೇಷ ವಿತ್ತ ವಲಯಗಳ ಮೌಲ್ಯ 21%ನಷ್ಟು ಕುಸಿತ ಕಂಡಿವೆ.
ಅದಾನಿ ಸಮೂಹದಲ್ಲಿ ಭಾರೀ ಹೂಡಿಕೆ ಮಾಡಿದ್ದ ವಿದೇಶದ ಮೂರು ಮೂಲಗಳನ್ನು ರಾಷ್ಟ್ರೀಯ ಸೆಕ್ಯೂರಿಟಿಸ್ ಡೆಪಾಸಿಟರಿ ಲಿ ಫ್ರೀಜ಼್ ಮಾಡಿದ ಕಾರಣ ಅದಾನಿಗೆ ಬಂಡವಾಳದ ಹರಿವು ಕೈಕೊಟ್ಟಿದೆ. ಹೀಗಾಗಿ ಅಡಾನಿ ಸಮೂಹದ ನಾಲ್ಕು ಕಂಪನಿಗಳು ಇದೇ ಅವಧಿಯಲ್ಲಿ 43,500 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿವೆ.
ಶೇರು ಮೌಲ್ಯಗಳ ಕುಸಿತದಿಂದ ಅದಾನಿ ಸಮೂಹದ ಕಂಪನಿಗಳ ಮೇಲೆ ಆಗಿರುವ ನಕಾರಾತ್ಮಕ ಪರಿಣಾಮದಿಂದ ಸಮೂಹದ ಮುಖ್ಯಸ್ಥ ಗೌತಮ್ ಅದಾನಿಯವರ ಆಸ್ತಿಯ ಮೌಲ್ಯ $77 ಶತಕೋಟಿಯಿಂದ $54.5 ಶತಕೋಟಿಗೆ ಇಳಿದಿದೆ.