alex Certify BIG NEWS: ಸೋಮವಾರದಿಂದಲೇ ಶಾಲೆ ಪುನಾರಂಭ, 1 -8 ನೇ ಕ್ಲಾಸ್ ಆರಂಭದ ಬಗ್ಗೆ ಸಚಿವ ನಾಗೇಶ್ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸೋಮವಾರದಿಂದಲೇ ಶಾಲೆ ಪುನಾರಂಭ, 1 -8 ನೇ ಕ್ಲಾಸ್ ಆರಂಭದ ಬಗ್ಗೆ ಸಚಿವ ನಾಗೇಶ್ ಮುಖ್ಯ ಮಾಹಿತಿ

ಬೆಂಗಳೂರು: ಆ. 23 ರಿಂದ ಪ್ರೌಢಶಾಲೆ 9 ಮತ್ತು 10 ನೇ ತರಗತಿಗಳು ಪುನಾರಂಭ ಮಾಡಲು ಸಂಪೂರ್ಣ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

ಶಾಲೆ ಪುನಾರಂಭದ ಪೂರ್ವಸಿದ್ಧತೆ ಪರಿಶೀಲನೆಗೆ ಬೆಂಗಳೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವಿಡಿಯೊ ಕಾನ್ಫ್‌ ರೆನ್ಸ್ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆಗೆ ಸಚಿವರು ಸಭೆ ನಡೆಸಿದರು.

ಶಾಲೆ ಆವರಣದಲ್ಲಿ ಶುಚಿತ್ವ ಅತಿ ಮುಖ್ಯ. ಶೌಚಗೃಹ, ಶಾಲಾ ಆವರಣ, ಕೊಠಡಿಗಳು ಸೇರಿದಂತೆ ಎಲ್ಲ ಕಡೆ ಶುಚಿತ್ವ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಶಾಲೆಗಳ ಮುಖ್ಯ ಗುರುಗಳು ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ. ಶುಚಿತ್ವ ಮತ್ತು ಸುರಕ್ಷತೆ ನಿರಂತರವಾಗಿ ಪಾಲನೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ’ ಎಂದು ಅಧಿಕಾರಿಗಳಿಗೆ ಸಚಿವರು ಕಟ್ಟು ನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಶಾಲೆ ಕೊಠಡಿಗಳು, ಆವರಣ, ಶೌಚಗೃಹ ಸೇರಿದಂತೆ ಕೊಠಡಿಗಳು, ಬೆಂಚುಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಜ್ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡುವ ಕುರಿತು ಶಿಕ್ಷಕರಿಗೆ ಮಾಹಿತಿಯನ್ನು ನೀಡಿ ತಿಳಿ ಹೇಳಲಾಗಿದೆ. ಮಕ್ಕಳು ಸಹಿತ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದರು.

ಮಕ್ಕಳಿಗೆ ಕುಡಿಯಲು ಬಿಸಿ ನೀರು ಒದಗಿಸಬೇಕು. ಸಾಧ್ಯವಾದರೆ ಮಕ್ಕಳೇ ಮನೆಯಿಂದ ಬಿಸಿ ನೀರು ತಂದುಕೊಂಡರೆ ಉತ್ತಮ. ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳು ಪರಿಪಾಲನೆಯಾಗುತ್ತಿರುವ ಕುರಿತು ಬಿಇಒಗಳು ತಮ್ಮ ವ್ಯಾಪ್ತಿಯ ಕನಿಷ್ಠ ಶೇ.50 ರಷ್ಟು ಶಾಲೆಗಳಿಗಾದರೂ ಭೇಟಿ ನೀಡಿ ಪರಿಶೀಲಿಸಬೇಕು. ಒಂದು ವೇಳೆ ಕೊಠಡಿ ಕೊರತೆಯಾದರೆ ಸಿಬ್ಬಂದಿ ಕೊಠಡಿ ಬಳಸಿಕೊಳ್ಳಬೇಕು. ಈ ಮೂಲಕ ಶಾಲೆಗಳು ಪುನಾರಂಭ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಶಾಲೆಗೆ ಬರಲು ಮಕ್ಕಳು ಉತ್ಸುಕ:

ಶಾಲೆ ಆರಂಭಿಸಲು ಮಕ್ಕಳು ಮತ್ತು ಪಾಲಕರ ಅಭಿಪ್ರಾಯವನ್ನು ಬಿಇಒಗಳು ಸಂಗ್ರಹಿಸಿದ್ದು, ಪಾಲಕರು ಶಾಲೆ ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ. ಮಕ್ಕಳು ಕೂಡ ಆಸಕ್ತಿ ತೋರಿಸುತ್ತಿದ್ದಾರೆ. ಒಂದೂವರೆ ವರ್ಷದಿಂದ ಭೌತಿಕ ಶಿಕ್ಷಣ ಸಿಗದೆ ಮಕ್ಕಳು ಬೇಸರಗೊಂಡಿದ್ದಾರೆ. ಮಕ್ಕಳನ್ನು ಕಳುಹಿಸುತ್ತೇವೆ. ಬೇಗ ಆರಂಭಿಸಿ ಎಂದು ಕೇಳುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಮಕ್ಕಳ ಪಾಲಕರು ಮತ್ತು ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಲಸಿಕೆ ಪಡೆಯದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬಹುದೇ ಎಂದು ಕೇಳುತ್ತಿದ್ದಾರೆ. ಆದರೆ, ಅದಕ್ಕೆ ಅವಕಾಶ ನೀಡಲಾಗದು. ಲಸಿಕೆ ಪಡೆಯಲು ಇನ್ನೂ ಸಮಯಾವಕಾಶ ಇದೆ. ಲಸಿಕೆ ಲಭ್ಯತೆ ಇರುವ ಕಾರಣ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಕೋವಿಡ್-19ನಿಂದ ಸುರಕ್ಷತೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಇಲಾಖೆಯಿಂದ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸೂಚಿಸಿದರು.

8, 9ನೇ ತರಗತಿಗಳು ಮತ್ತು ಪಿಯು ಕಾಲೇಜು ಆರಂಭಿಸಿದ ಬಳಿಕ ಬರುವ ಪ್ರತಿಕ್ರಿಯೆಗಳು 1ರಿಂದ 8ನೇ ತರಗತಿವರೆಗಿನ ಶಾಲೆ ಪುನಾರಂಭಿಸಲು ನೆರವಾಗುತ್ತವೆ. ಹೀಗಾಗಿ, ರಾಜ್ಯದ ಎಲ್ಲ ಗ್ರಾಮ, ಪಟ್ಟಣ, ತಾಲೂಕು, ನಗರಗಳಲ್ಲಿ ವಯೋಮಿತಿ ಸಹಿತ ಕೋವಿಡ್ ಪ್ರಕರಣಗಳ ಮಾಹಿತಿಯನ್ನು ಪಡೆದುಕೊಳ್ಳಬೇಕು. ಈ ಮಾಹಿತಿ ಸಂಗ್ರಹಿಸುವುದರಿಂದ ಮಕ್ಕಳಲ್ಲಿ ಕೋವಿಡ್ ಪ್ರಮಾಣ ಎಷ್ಟಿದೆ ಎಂಬುದರ ಚಿತ್ರಣ ಸಿಗುತ್ತದೆ. ಆರೋಗ್ಯ ಇಲಾಖೆಯಲ್ಲಿ ಈ ಮಾಹಿತಿ ಇದ್ದು, ಅದನ್ನು ಸಂಗ್ರಹಿಸಿ ಅಧ್ಯಯನ ಮಾಡಿದರೆ 1ರಿಂದ 8ನೇ ತರಗತಿ ಶಾಲೆ ಆರಂಭಿಸಲು ಸೂಕ್ತ ಸಿದ್ಧತೆ ಮತ್ತು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನೆಟ್‌ವರ್ಕ್ ಸಮಸ್ಯೆ, ಮೊಬೈಲ್, ಲ್ಯಾಪ್‌ ಟಾಪ್ ಕೊರತೆ ಕಾರಣ ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಾಲ ಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ. ವಿವಾಹವಾಗಿದ್ದಾರೆ ಎಂಬ ಮಾಹಿತಿ ಹಲವು ಸರ್ವೇಗಳಿಂದ ಬೆಳಕಿಗೆ ಬಂದಿದೆ. ಮಕ್ಕಳ ಶೈಕ್ಷಣಿಕ ಜೀವನ ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ, ನಿಮ್ಮೆಲ್ಲರ ಮೇಲಿದೆ. ಯಾರಾದರೂ ಪಾಲಕರು ಹಿಂಜರಿದರೆ ಅವರೊಂದಿಗೆ ಮಾತನಾಡಿ ಧೈರ್ಯ ತುಂಬಿ ಮಕ್ಕಳನ್ನು ಶಾಲೆಗೆ ಕರೆತರುವಂತೆ ಮನವರಿಕೆ ಮಾಡಿಕೊಡಬೇಕು’ ಎಂದು ಸೂಚಿಸಿದರು.

ಶಿಕ್ಷಕರ ಬೇಡಿಕೆ ಈಡೇರಿಸುವ ಪ್ರಯತ್ನ:

ಶಿಕ್ಷಕರ ವೇತನ, ಭಡ್ತಿ ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಮುಂಬರುವ ‘ಶಿಕ್ಷಕರ ದಿನಾಚರಣೆ’ ಒಳಗಾಗಿ ಧನಾತ್ಮಕವಾಗಿ ಸ್ಪಂದಿಸಬೇಕು ಎಂಬ ಆಸೆ ನನಗಿದೆ. ಬೇಡಿಕೆಗಳನ್ನು ನನ್ನ ಗಮನಕ್ಕೆ ತಂದರೆ ಈಡೇರಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...