ವಿಶ್ವದಾದ್ಯಂತ ಕೊರೊನಾ ನಿಯಂತ್ರಣಕ್ಕೆ ಲಸಿಕೆ ಹಾಕಲಾಗ್ತಿದೆ. ಸಿಂಗಾಪುರದಲ್ಲಿ ನಡೆದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಸಿಂಗಾಪುರದಲ್ಲಿ 16 ವರ್ಷದ ಹುಡುಗನಿಗೆ ಕೊರೊನಾ ಲಸಿಕೆ ಹಾಕಿದ ನಂತರ ಹೃದಯಾಘಾತವಾಗಿದೆ.
ಸಿಂಗಾಪುರದ ಹುಡುಗನಿಗೆ ಫೈಜರ್ ಲಸಿಕೆ ಹಾಕಲಾಗಿತ್ತು. ಲಸಿಕೆ ಪಡೆದ ಕೇವಲ 6 ದಿನಗಳ ನಂತರ ಹೃದಯಾಘಾತವಾಗಿದೆ. ಲಸಿಕೆ ನಂತ್ರ ಹೃದಯಾಘಾತವಾಗಿದೆ ಎನ್ನುತ್ತಿರುವ ಕುಟುಂಬಸ್ಥರು ಸರ್ಕಾರದಿಂದ ಪರಿಹಾರ ಕೇಳಿದ್ದಾರೆ. ಇದನ್ನು ಪರಿಗಣಿಸಿದ ಸರ್ಕಾರ ಆತನ ಕುಟುಂಬಕ್ಕೆ ಪರಿಹಾರ ಘೋಷಿಸಿದೆ. ಸದ್ಯಕ್ಕೆ, ಹುಡುಗನ ಸ್ಥಿತಿ ಸುಧಾರಿಸುತ್ತಿದೆ.
16 ವರ್ಷದ ಹುಡುಗನಿಗೆ ಸರ್ಕಾರ, 1.5 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ. ಲಸಿಕೆ ಪಡೆದ ನಂತರ, ಯುವಕನಿಗೆ ಮಯೋಕಾರ್ಡಿಟಿಸ್ ಸಮಸ್ಯೆ ಇದ್ದು, ಈ ಕಾರಣದಿಂದಾಗಿ ಆತನಿಗೆ ಈ ಹೃದಯಾಘಾತವಾಗಿದೆ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ಕಂಡು ಬಂದಿದೆ. ಕೊರೊನಾ ಲಸಿಕೆಯಿಂದ ಮಯೋಕಾರ್ಡಿಟಿಸ್ ಬರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಬರೆಯಲಾಗಿದೆ. ಅತಿಯಾದ ಕೆಫೀನ್ ಮತ್ತು ಭಾರವಾದ ವಸ್ತುಗಳನ್ನು ಎತ್ತಿದ ಕಾರಣ, ಅವನ ಹೃದಯದ ಮೇಲೆ ಒತ್ತಡ ಬಿದ್ದಿದೆ ಎಂಬ ಭಯ ಕೂಡ ಇದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಮಯೋಕಾರ್ಡಿಟಿಸ್ ಸಾಮಾನ್ಯವಾಗಿ ವೈರಲ್ ಸೋಂಕಿನಿಂದ ಉಂಟಾಗುತ್ತದೆ.
ಮಯೋಕಾರ್ಡಿಟಿಸ್, ಹೃದಯ ದುರ್ಬಲಗೊಳ್ಳುವ ಒಂದು ಕಾಯಿಲೆಯಾಗಿದೆ. ಇದು ಹೃದಯಾಘಾತ ಮತ್ತು ಸಾವಿಗೆ ಕಾರಣವಾಗಬಹುದು. ಎದೆ ನೋವು ಮತ್ತು ಉಸಿರಾಟದ ತೊಂದರೆ ಈ ರೋಗದ ಸಾಮಾನ್ಯ ಲಕ್ಷಣಗಳಾಗಿವೆ.