ಮದುವೆಯಾದ ಮಹಿಳೆಯೊಂದಿಗೆ ಇಟ್ಟುಕೊಳ್ಳುವ ಲಿವಿಂಗ್-ಇನ್ ಸಂಬಂಧ ಅಕ್ರಮ ಎಂದು ತೀರ್ಪಿತ್ತ ರಾಜಸ್ಥಾನ ಹೈಕೋರ್ಟ್, ದೂರುದಾರ ಮಹಿಳೆಗೆ ಪೊಲೀಸ್ ರಕ್ಷಣೆ ನೀಡಲು ನಿರಾಕರಿಸಿದೆ.
ಕೌಟುಂಬಿಕ ಹಿಂಸಾಚಾರದ ಸಂತ್ರಸ್ತೆಯಾಗಿರುವ ತಾನು ಗಂಡನ ಮನೆ ಬಿಟ್ಟಿರುವುದಾಗಿ ಹೇಳಿರುವ 30 ವರ್ಷ ವಯಸ್ಸಿನ ಅರ್ಜಿದಾರೆ ಹಾಗೂ 27 ವರ್ಷ ವಯಸ್ಸಿನ ಆಕೆಯ ಬಾಯ್ ಫ್ರೆಂಡ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಧೀಶ ಸತೀಶ್ ಕುಮಾರ್ ಶರ್ಮಾ ಆಲಿಸಿದ್ದಾರೆ.
ಜುಂಝುನು ಜಿಲ್ಲೆಯವರಾದ ಇಬ್ಬರೂ ಅರ್ಜಿದಾರರು ವಯಸ್ಕರಾದ ಕಾರಣ ಪರಸ್ಪರ ಸಹಮತದಿಂದ ಲಿವ್-ಇನ್ ಸಂಬಂಧದಲ್ಲಿ ಇರಲು ಅರ್ಹರು ಎಂದು ಅವರ ಪರ ವಕೀಲರು ಆಲಿಕೆ ವೇಳೆ ವಾದಿಸಿದ್ದಾರೆ. ಗಂಡನಿಂದ ದೈಹಿಕ ಹಿಂಸಾಚಾರವಿದ್ದ ಕಾರಣ ಈ ವಿವಾಹಿತ ಮಹಿಳೆ ಪ್ರತ್ಯೇಕವಾಗಿ ಬದುಕುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
“ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ನೋಡಿದ ಬಳಿಕ ಮೊದಲ ಅರ್ಜಿದಾರರು ವಿವಾಹಿತರಾಗಿದ್ದು, ವಿಚ್ಛೇದನ ಪಡೆಯದೇ ಎರಡನೇ ಅರ್ಜಿದಾರರೊಂದಿಗೆ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇಂಥ ಪರಿಸ್ಥಿತಿಯಲ್ಲಿ ಇಬ್ಬರ ನಡುವಿನ ಲಿವ್-ಇನ್ ಸಂಬಂಧ ಅಕ್ರಮವಾಗುತ್ತದೆ” ಎಂದು ತನ್ನ ಆದೇಶದಲ್ಲಿ ಕೋರ್ಟ್ ತಿಳಿಸಿದೆ.
ಇಂಥದ್ದೇ ಮತ್ತೊಂದು ಪ್ರಕರಣದಲ್ಲಿ; ತನ್ನ ಸಂಗಾತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ಮುಂದುವರೆಯಲು ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಅಲಹಾಬಾದ್ ಹೈಕೋರ್ಟ್, ದೇಶದ ಸಾಮಾಜಿಕ ಅನ್ಯೋನ್ಯತೆ ಬಲಿ ಕೊಟ್ಟು ಲಿವ್-ಇನ್ ಸಂಬಂಧ ಬೆಳೆಸಲು ಬರುವುದಿಲ್ಲ ಎಂದಿತ್ತು.
“ಇಂಥ ಕೆಲಸಗಳಿಗೆ ಪೊಲೀಸ್ ರಕ್ಷಣೆ ಕೊಡಿ ಎಂದು ಆದೇಶಿಸುವುದು, ಅಕ್ರಮ ಸಂಬಂಧಗಳಿಗೆ ಪರೋಕ್ಷವಾಗಿ ಸಮ್ಮತಿ ಕೊಟ್ಟಂತೆ” ಎಂದು ಹೈಕೋರ್ಟ್‌ನ ವಿಭಾಗೀಯ ಪೀಠವೊಂದು ತೀರ್ಪಿನಲ್ಲಿ ಹೇಳಿತ್ತು.