ಕುಡಿತ ಅಮಲಿನಲ್ಲಿ ಎಡವಟ್ಟುಗಳನ್ನು ಮಾಡಿ ಪದೇ ಪದೇ ಬಂಧಿತನಾಗುತ್ತಲೇ ಬಂದಿರುವ ಟೆಕ್ಸಾಸ್ನ ವ್ಯಕ್ತಿಯೊಬ್ಬನಿಗೆ $5.5 ದಶಲಕ್ಷವನ್ನು ಪರಿಹಾರದ ಮೊತ್ತವಾಗಿ ನೀಡಲು ಕೋರ್ಟ್ ಒಂದು ಆದೇಶಿಸಿದೆ.
ಲಾ ಫೊಗಾಟಾ ಮೆಕ್ಸಿಕನ್ ಗ್ರಿಲ್ಸ್ ಎಂಬ ಜಾಗದಲ್ಲಿ ಜಗಳವಾಡಿಕೊಂಡು ದೈಹಿಕ ಗಾಯಗಳನ್ನು ಮಾಡಿಕೊಂಡ ಡೇನಿಯಲ್ ರಾಲ್ಸ್ ಹೆಸರಿನ ಈತ, ತಾನು ಕುಡಿಯುವಂತೆ ಮಾಡಿದ್ದು ಬಾರ್ನ ತಪ್ಪಾಗಿದ್ದು, ಅವರಿಂದಲೇ ಹೀಗೆ ಜಗಳವಾಡಿದ್ದಾಗಿ ಆರೋಪಿಸಿ ಕೇಸ್ ದಾಖಲಿಸಿದ್ದಾನೆ.
ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ನಡೆದ ಈ ನ್ಯಾಯಾಂಗ ಹೋರಾಟದಲ್ಲಿ ಗೆದ್ದ ಡೇನಿಯಲ್ಗೆ ಪರಿಹಾರದ ರೂಪದಲ್ಲಿ $.5.5 ದಶಲಕ್ಷ ನೀಡಲು ರೆಸ್ಟೋರೆಂಟ್ಗೆ ನ್ಯಾಯಾಲಯ ಆದೇಶಿಸಿದೆ.
ಡೇನಿಯಲ್ ಗೆ ಹೀಗೆ ಗಾಯಗಳಾಗಲು ಆತನಿಗೆ ಅತಿಯಾಗಿ ಕುಡಿಯಲು ಬಿಟ್ಟಿದ್ದೇ ಕಾರಣವೆಂದು ಬಾರಿನ ಮಾಲೀಕ ಲೌರ್ಡೆಸ್ ಗಲಿಂಡೋ ಮೇಲೆ ಕೇಸಿನಲ್ಲಿ ಆಪಾದಿಸಲಾಗಿದೆ. ಡೇನಿಯಲ್ಗೆ ಜಗಳದಲ್ಲಿ ಗಾಯಗಳಾದರೂ ಸಹ ಆಂಬುಲೆನ್ಸ್ಅನ್ನು ಕರೆಯಿಸಿಲ್ಲ ಎಂದು ದೂರಿನಲ್ಲಿ ರೆಸ್ಟೋರೆಂಟ್ ಮಾಲೀಕನ ವಿರುದ್ಧ ಆಪಾದನೆ ಮಾಡಲಾಗಿದೆ.
ಬಾರಿನ ಮಾಲೀಕ ಕೋರ್ಟ್ನ ಒಂದೇ ಒಂದು ಆಲಿಕೆಗೂ ಪ್ರತಿಕ್ರಿಯಿಸದೇ ಇದ್ದ ಕಾರಣ ಡೇನಿಯಲ್ ಈ ಕೇಸನ್ನು ಆರಾಮಾಗಿ ಗೆದ್ದುಕೊಂಡಿದ್ದಾನೆ.
ಇಲ್ಲಿನ ಆಂಡ್ರೂಸ್ ಕೌಂಟಿ ಜೈಲಿನ ದಾಖಲೆಗಳ ಪ್ರಕಾರ ಕುಡಿದ ಮತ್ತಿನಲ್ಲಿ ಮಾಡಿದ ಅವಾಂತರಗಳಿಂದಾಗಿ ಡೇನಿಯಲ್ನನ್ನು ಫೆಬ್ರವರಿ 2019 ಮತ್ತು ಮೇ 2020ರಲ್ಲಿ ಬಂಧಿಸಲಾಗಿತ್ತು.