ಬೆಂಗಳೂರು: ಮಾರಕ ಕೊರೋನಾ ಸೋಂಕಿನಿಂದ ಗುಣಮುಖರಾದವರು ಟಿಬಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಆಗಸ್ಟ್ 31 ರವರೆಗೆ ಕ್ಷಯರೋಗ ಪತ್ತೆ ಆಂದೋಲನ ನಡೆಯಲಿದ್ದು, ವಿಧಾನಸೌಧದಲ್ಲಿ ಚಾಲನೆ ನೀಡಿದ ಸಚಿವರು, ಕೊರೋನಾ ಸೋಂಕಿನಿಂದ ಗುಣಮುಖರಾದವರು ಕ್ಷಯರೋಗ ಪತ್ತೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಸೋಂಕಿನಿಂದ ಶ್ವಾಸಕೋಶಕ್ಕೆ ಹಾನಿಯಾಗಿರಬಹುದು. ರಾಜ್ಯದಲ್ಲಿ 28 ಲಕ್ಷಕ್ಕೂ ಅಧಿಕ ಮಂದಿ ಕೊರೋನಾದಿಂದ ಗುಣಮುಖರಾಗಿದ್ದು, ಅವರಲ್ಲಿ ಶ್ವಾಸಕೋಶಕ್ಕೆ ಹಾನಿ ಉಂಟಾಗಿರುವ ಸಾಧ್ಯತೆಯಿರುತ್ತದೆ. ಕ್ಷಯರೋಗ ಶ್ವಾಸಕೋಶಕ್ಕೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೊರೋನಾದಿಂದ ಗುಣಮುಖರಾದವರು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕೋವಿಡ್ -19 ಮತ್ತು ಟಿಬಿ ಎರಡೂ ಶ್ವಾಸಕೋಶಗಳಿಗೆ ಸೋಂಕು ತಗುಲಿರುವ ಕಾರಣ ವೈರಸ್ನಿಂದ ಚೇತರಿಸಿಕೊಂಡ ಜನರಲ್ಲಿ ಕ್ಷಯರೋಗವನ್ನು ಮೊದಲೇ ಪತ್ತೆ ಹಚ್ಚುವುದನ್ನು ಖಚಿತಪಡಿಸಿಕೊಳ್ಳಲು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದೇವೆ. ಕೋವಿಡ್ -19 ರಿಂದ ಚೇತರಿಸಿಕೊಂಡ ಜನರು ಸ್ವಯಂಪ್ರೇರಣೆಯಿಂದ ಟಿಬಿಗಾಗಿ ತಮ್ಮನ್ನು ತಾವು ಮೌಲ್ಯಮಾಪನ ಮಾಡಿಕೊಳ್ಳಬೇಕು. ಇದನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಿದರೆ ಚಿಕಿತ್ಸೆ ಸುಲಭವಾಗುತ್ತದೆ ಎಂದು ಹೇಳಿದ್ದಾರೆ.