ಶಬರಿಮಲೆ ಮಂದಿರದ ವಿಚಾರದಲ್ಲಿ ಕೇರಳ ಹೈಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಈ ತೀರ್ಪಿನ ಪ್ರಕಾರ ಶಬರಿಮಲೆಗೆ ತೆರಳುವ ಪುರುಷರು ತಮ್ಮ ಜೊತೆಯಲ್ಲಿ 10 ವರ್ಷದೊಳಗಿನ ಪ್ರಾಯದ ಪುತ್ರಿಯನ್ನು ಕರೆದೊಯ್ಯಬಹುದಾಗಿದೆ.
ಶಬರಿಮಲೆ ದೇಗುಲ ದರ್ಶನ ಸಂಬಂಧ 9 ವರ್ಷದ ಬಾಲಕಿ ಸಲ್ಲಿಸಿದ ಅರ್ಜಿಯನ್ನು ವಿಚಾರಿಸಿದ ಕೇರಳ ಹೈಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ. ಈ ಬಾಲಕಿಯು 23 ಆಗಸ್ಟ್ರಂದು ತನ್ನ ತಂದೆಯ ಜೊತೆಗೆ ಶಬರಿಮಲೆಗೆ ತೆರಳಲು ಅನುಮತಿ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು. 10 ವರ್ಷದೊಳಗೆ ತನಗೆ ಶಬರಿಮಲೆ ದರ್ಶನ ಮಾಡಲು ಸಾಧ್ಯವಾಗದೇ ಹೋದಲ್ಲಿ ಇನ್ನೂ 4 ದಶಕಗಳ ಕಾಲ ಕಾಯಬೇಕು ಅನ್ನೋದು ಬಾಲಕಿಯ ವಾದವಾಗಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ಬಳಿಕ ಮಾತನಾಡಿದ ಕೋರ್ಟ್, ಅರ್ಜಿದಾರ ಬಾಲಕಿಯು ಆಗಸ್ಟ್ 23ರಂದು ಶಬರಿಮಲೆ ಯಾತ್ರೆಗೆ ತನ್ನ ತಂದೆಯ ಜೊತೆಗೆ ಹೋಗಬಹುದು ಎಂದು ಹೇಳಿದೆ.
ಈ ಹಿಂದೆ ಕೇರಳ ಹೈಕೋರ್ಟ್ ಕೊರೊನಾ ಲಸಿಕೆಯನ್ನು ಸ್ವೀಕರಿಸಿದವರು ಮಾತ್ರ ಶಬರಿಮಲೆಯಾತ್ರೆಯನ್ನು ಕೈಗೊಳ್ಳಬಹುದು ಎಂದು ಹೇಳಿತ್ತು. ಹೀಗಾಗಿ 9 ವರ್ಷದ ಬಾಲಕಿ ತನಗೂ ಶಬರಿಮಲೆಗೆ ಅನುಮತಿ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು. ಇದೀಗ ಲಸಿಕೆ ಪಡೆಯದ ಮಕ್ಕಳು ತಂದೆಯ ಜೊತೆ ಶಬರಿಮಲೆ ಯಾತ್ರೆ ಕೈಗೊಳ್ಳಬಹುದು ಎಂದು ಹೇಳಿದೆ.
ಈ ಶಬರಿಮಲೆ ದೇಗುಲವು ಸರಿ ಸುಮಾರು 800 ವರ್ಷ ಹಿಂದಿನ ಇತಿಹಾಸವನ್ನು ಹೊಂದಿದೆ. ಅಯ್ಯಪ್ಪ ಸ್ವಾಮಿಯು ಬ್ರಹ್ಮಚಾರಿ ಆಗಿರುವ ಕಾರಣ ಈ ದೇಗುಲಕ್ಕೆ ಮಹಿಳೆಯರು ಬರಬಾರದು ಅನ್ನೋದು ದೇವಸ್ಥಾನದ ವಾದವಾಗಿದೆ. 2006ರಲ್ಲಿ ಮುಖ್ಯ ಜ್ಯೋತಿಷಿ ಉನ್ನಿಕೃಷ್ಣನ್, ದೇಗುಲಕ್ಕೆ ಯುವತಿಯ ಪ್ರವೇಶದಿಂದ ಅಯ್ಯಪ್ಪನ ಶಕ್ತಿ ಕಡಿಮೆಯಾಗಿದೆ ಎಂದು ಹೇಳಿಕೆ ನೀಡಿದ್ದರು.
ಸ್ಯಾಂಡಲ್ವುಡ್ ಹಿರಿಯ ನಟಿ ಜಯಮಾಲಾ ತಾವು ಅಯ್ಯಪ್ಪನ ಮೂರ್ತಿಯನ್ನು ಸ್ಪರ್ಶಿಸಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ವಿವಾದದ ಕೇಂದ್ರ ಬಿಂದು ಆಗಿದ್ದರು.