
ಅತ್ಯಾಚಾರದ ಪ್ರಕರಣವೊಂದನ್ನು ವಜಾಗೊಳಿಸಬೇಕೆಂದು ದೂರುದಾರರು ಹಾಗೂ ಆಪಾದಿತರು ಮಾಡಿದ ಮನವಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಸುಳ್ಳು ಆರೋಪಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದೆ.
“ಭಯ ಅಥವಾ ಅಪಮಾನದಿಂದ ಎದುರುದಾರರು ತಮ್ಮ ಬೇಡಿಕೆಗಳಿಗೆ ಬಗ್ಗುತ್ತಾರೆ ಎಂಬ ಕಾರಣಕ್ಕೆ ಇಂಥ ಅನೇಕ ಅರ್ಜಿಗಳನ್ನು ದುರುದ್ದೇಶದಿಂದ ಸಲ್ಲಿಸಲಾಗುತ್ತಿದೆ. ತಪ್ಪು ಮಾಡಿದವರಿಗೆ ತಮ್ಮ ಪ್ರಮಾದಗಳಿಗೆ ಶಿಕ್ಷೆ ಆಗದೇ ಇದ್ದಲ್ಲಿ, ಇಂಥ ಸುಳ್ಳು ದೂರುಗಳನ್ನು ತಪ್ಪಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಧೀಶ ಸುಬ್ರಮಣಿಯಂ ಪ್ರಸಾದ್ ತಿಳಿಸಿದ್ದಾರೆ.
ರಾಜಧಾನಿಯ ಅಮನ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಐಪಿಸಿಯ 376ನೇ ವಿಧಿಯಡಿ ಮಾಡಲಾಗಿದ್ದ ಎಫ್‌ಐಆರ್ ಅನ್ನು ವಜಾಗೊಳಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೋರ್ಟ್ ತಳ್ಳಿಹಾಕಿದೆ. 2019ರಲ್ಲಿ ಒಂದೇ ಠಾಣೆಯಲ್ಲಿ ದೂರುದಾರರು ಹಾಗೂ ಎದುರುದಾರರು ಪರಸ್ಪರರ ವಿರುದ್ಧ ದೂರು ಕೊಟ್ಟಿದ್ದರು. ಒಂದು ಪ್ರಕರಣದಲ್ಲಿ ಖುದ್ದು ವಕೀಲರೇ ದೂರುದಾರರಾಗಿದ್ದು, ಮತ್ತೊಂದರಲ್ಲಿ ಆಪಾದಿತ ವಕೀಲರೊಬ್ಬರ ಮಡದಿ ದೂರುದಾರರಾಗಿದ್ದಾರೆ.
ಪದೇ ಪದೇ ನೌಕರಿ ಬದಲಿಸ್ತಿದ್ದರೆ ಪಿಎಫ್ ಖಾತೆಯ ಈ ವಿಷ್ಯ ತಿಳಿದಿರಲಿ
“ಅತ್ಯಾಚಾರ ಎಂದರೆ ದೈಹಿಕ ಹಲ್ಲೆ ಮಾತ್ರವಲ್ಲ; ಅದರಿಂದ ಸಂತ್ರಸ್ತರ ಇಡೀ ಕುಟುಂಬ ಕುಗ್ಗಿಹೋಗುತ್ತದೆ. ಅತ್ಯಾಚಾರದಿಂದಾಗಿ ಸಂತ್ರಸ್ತರು ಮಾನಸಿಕವಾಗಿ ಕುಸಿಯುತ್ತಾರೆ, ಈ ನೋವು ವರ್ಷಗಳ ಕಾಲ ಹಾಗೇ ಇರಬಹುದು” ಎಂದು ಕೋರ್ಟ್ ತಿಳಿಸಿದೆ.
ಇದೇ ವೇಳೆ, ಸುಳ್ಳು ದೂರುಗಳ ತನಿಖೆ ನಡೆಸಲು ಪೊಲೀಸ್ ಠಾಣೆಗಳ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತಿದ್ದು, ಸುಖಾಸುಮ್ಮನೇ ದೂರು ಕೊಟ್ಟ ಕೂಡಲೇ 376ನೇ ವಿಧಿಯಡಿ ಎಫ್‌ಐಆರ್ ದಾಖಲಿಸುವುದು ಸರಿಯಲ್ಲ ಎಂದ ಹೈಕೋರ್ಟ್, “ಸುಳ್ಳು ಆಪಾದನೆಗಳ ಆಲಿಕೆಯಿಂದಾಗಿ ನ್ಯಾಯಾಂಗದ ಅಮೂಲ್ಯ ಸಮಯ ಹಾಳಾಗುತ್ತಿದ್ದು, ಇದು ನ್ಯಾಯಾಂಗ ಪ್ರಕ್ರಿಯೆಯನ್ನೇ ಅಣಕ ಮಾಡಿದಂತೆ.
ಹೀಗಾಗಿ, ಅತ್ಯಾಚಾರದ ಸುಳ್ಳು ಆಪಾದನೆಗಳನ್ನು ಮಾಡುವ ಮಂದಿಯನ್ನು ಸುಮ್ಮನೇ ಬಿಡಬಾರದು. ಅತ್ಯಾಚಾರದ ಸುಳ್ಳು ಪ್ರಕರಣಗಳು ಹೆಚ್ಚಾಗುತ್ತಿರುವುದು ಕೋರ್ಟ್‌ಗೆ ನೋವು ತಂದಿದ್ದು, ಐಪಿಸಿಯ 354, 354ಎ, 354ಸಿ ಮತ್ತು 354ಡಿ ವಿಧಿಗಳನ್ನು ಬಳಸಿಕೊಂಡು ಆಪಾದಿತರನ್ನು ತಮ್ಮ ದಾಳಕ್ಕೆ ತಕ್ಕಂತೆ ಕುಣಿಸುವಂತ ನಿದರ್ಶನಗಳು ಹೆಚ್ಚಾಗುತ್ತಿವೆ” ಎಂದು ತನ್ನ ಆದೇಶದಲ್ಲಿ ಕೋರ್ಟ್ ತಿಳಿಸಿದೆ.